
ಮಾಯಾದರ್ಪಣ
ಎಂ.ಎಸ್. ಶ್ರೀರಾಮ್
ತರುಣ ಲೇಖಕರಾದ ಎಂ ಎಸ್ ಶ್ರೀರಾಮ್ ಅವರ ಕತೆಗಳ ಸಂಕಲನ `ಮಾಯಾದರ್ಪಣ’ದಲ್ಲಿ ೧೩ ಕತೆಗಳಿವೆ; ತರುಣ ಬರಹಗಾರನೊಬ್ಬನ ಉತ್ಸಾಹ, ತಿಕ್ಕಲುತನ ತೋರುವ ಜೊತೆಗೇ ಈ ಕತೆಗಳು ತರುಣರ ಬೆಚ್ಚನೆಯ ಭಾವವನ್ನೂ ತೋರುತ್ತವೆ. ಇವೆಲ್ಲಕಿಂತ ಹೆಚ್ಚಾಗಿ ನಿಜಕ್ಕೂ ಸಾಹಿತಿಯಾದವನು ತಾರುಣ್ಯದಲ್ಲಿ ತೋರಲೇಬೇಕಾದ ನುಡಿಗಟ್ಟಿನ ಹೊಸತನ, ನೋಟದ ಹೊಸತನ ತೋರುತ್ತವೆ,
ಪಿ ಲಂಕೇಶ್
ಶ್ರೀರಾಮ್ ಅವರ ಎಲ್ಲ ಕತೆಗಳೂ ಕುತೂಹಲದಿಂದ ಓದಿಸಿಕೊಂಡು ಹೋಗುವುದರ ಜೊತೆಗೆ ಬದುಕಿನ ಸೂಕ್ಷ್ಮಗಳನ್ನು ಹೊಳೆಯಿಸುತ್ತವೆ. ಹಾಗೂ ಇಂದಿನ ಮೌಲ್ಯಗಳ ಕುಸಿತದ ಬಗ್ಗೆಯೂ ನಮ್ಮನ್ನು ಗಾಢವಾಗಿ ಚಿಂತನೆಯಲ್ಲಿ ತೊಡಗಿಸುತ್ತವೆ. ನಮ್ಮ ತರುಣ ಲೇಖಕರಿಂದ ಇಂತಹ ಉತ್ಕೃಷ್ಟ ಪ್ರಯೋಗಗಳು ಇನ್ನೂ ನಡೆಯುತ್ತಿರುವಾಗ ನವ್ಯ ಕತೆಗಳ ಪರಂಪರೆಗೆ ಭರತವಾಕ್ಯ ಹಾಡುವುದು ಅಕಾಲಿಕವೆನ್ನಿಸದಿರದು. ನವ್ಯತೆಯ ಒಂದು ಹೊಸ ಅಲೆಯ ಹುಟ್ಟಿನ ಅನುಭವವನ್ನು ತರುವ `ಮಾಯಾದರ್ಪಣ’ ಒಂದು ಸ್ವಾಗತಾರ್ಹ ಕೃತಿ.
ಕೆ ನರಸಿಂಹಮೂರ್ತಿ
ಬೆಲೆ ರೂ 200/-

ಒಳ್ಳೆಯವನು
ಅಶೋಕ ಹೆಗಡೆ
…ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಎತ್ತಿ ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದುಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು; ಎಲ್ಲರ ನೋವು, ನಲಿವು, ಸಡಗರ ಮತ್ತು ಇದೆಲ್ಲದರ ಮಧ್ಯವೂ ಅರಳುವ ಬದುಕಿನ ಮಳೆಯ ಹಾತೆಯ ಒಂದು ಕ್ಷಣವನ್ನ ಹಿಡಿದಿಡಲು ಮೀಸಲಿಟ್ಟ ಈ ಕ್ಷಣವೊಂದು ನಿನ್ನನ್ನು ತಲುಪುವಲ್ಲಿ ಮಾತ್ರ ಧನ್ಯವಾಗಬಲ್ಲದು…
ಬೆಲೆ ರೂ 175/-

ಜಾತ್ರೆಯಲ್ಲಿ ಶಿವ
ಸವಿತಾ ನಾಗಭೂಷಣ
ಸಮಕಾಲೀನ ಕನ್ನಡ ಕವಯತ್ರಿಯರ ನಡುವೆ ವಿಭಿನ್ನವೂ ವಿಶಿಷ್ಟವೂ ಆದ ವ್ಯಕ್ತಿತ್ವವನ್ನುಳ್ಳ ಸವಿತಾ ಅವರ ಕವಿತೆ, ಬದುಕನ್ನು ಉತ್ಕಟವಾಗಿ ಪ್ರೀತಿಸುವ ಎಲ್ಲರ ಧ್ವನಿಯೂ ಆಗಿದೆ.
ಜಿ.ಎಸ್. ಶಿವರುದ್ರಪ್ಪ
ನಿಮ್ಮ ಪದ್ಯಗಳ ನಿರಾಡಂಬರ ಸರಳತೆ, ಅನಿರೀಕ್ಷಿತ ಬೆಳವಣಿಗೆ ಮತ್ತು ಕೆಲವೆಡೆಯಲ್ಲಿನ ಸಾರ್ಥಕ ಮುಕ್ತಾಯ ಇವೊತ್ತಿನ ಕವಿಗಳಿಗೆ ಪಾಠವಾಗುವಂಥದು. ಸ್ತ್ರೀವಾದಿತ್ವದ ಉರುಬಿನಲ್ಲಿ ಬದುಕಿನ ಅನೇಕಮುಖಿ ಅನುಭವಗಳಿಗೆ ನೀವು ಎರವಾಗದಿರುವುದು ಹಾಗೂ ಆ ಅನುಭವಗಳನ್ನು ಸಂವೇದನಾತ್ಮಕವಾಗಿ ಪಡೆಯಲು ಉತ್ಸುಕರಾಗಿರುವುದು ಶ್ಲಾಘನೀಯವೆನ್ನಿಸುತ್ತದೆ. ನಮ್ಮ ಕವಯತ್ರಿಯರಲ್ಲೇ ನಿಮಗೊಂದು ವಿಶಿಷ್ಟ ಸ್ಥಾನವಿರುವುದನ್ನು ನಿಮ್ಮ ಪದ್ಯಗಳ ಮೂಲಕ ನಾನು ಗುರುತಿಸಿದ್ದೇನೆ.
ಕೆ.ಎಸ್. ನಿಸಾರ್ ಅಹಮದ್
ನಿಮ್ಮ ಕವಿತೆಗಳೆಲ್ಲಾ ಮಧುರ ಧ್ವನಿಯವು. ‘ಜಾತ್ರೆಯಲ್ಲಿ ಶಿವ’ ನಿಮ್ಮೆಲ್ಲಾ ಹಿಂದಿನ ಕವಿತೆಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದರ ಸರಳತೆ ಹಾಗೂ ತಿರುವುಗಳು ಬಹುಶಃ ನಿಮ್ಮ ಒಟ್ಟಾರೆ ಕಾವ್ಯದಲ್ಲೇ ವಿಶಿಷ್ಟವೆನಿಸುವಂಥವು.
ಕೆ.ವಿ. ತಿರುಮಲೇಶ್
ಬೆಲೆ ರೂ 135/-

ಅಜ್ಜಿ ಕರೆದ ಹಾಗಾಯಿತು
ಸವಿತಾ ನಾಗಭೂಷಣ
ತಮ್ಮ ಕಥೆಗಳ ಮೂಲಕ ಈ ಲೋಕದ ಬಾಲ್ಯಗಳನ್ನು ಬೆಳಗಿಸಿದ ಅಜ್ಜಮ್ಮಂದಿರ ಸಂಪ್ರದಾಯದಿಂದ ಪ್ರೇರಣೆ ಪಡೆದು, ಹೊಸಗಾಲದ ವಸ್ತು-ವಿಚಾರ-ವಿನ್ಯಾಸಗಳನ್ನು ಮನಸ್ಸಲ್ಲಿ ಇಟ್ಟುಕೊಂಡು ಕಟ್ಟಿದ ಮೂವತ್ತು ಕಿರು ಕಥನಗಳು ಇಲ್ಲಿವೆ. ಈ ಕತೆಗಳು ಒಂದೊಂದೂ ಬೇರೆ ಬಗೆಯದೇ ಆಗಿದ್ದರೂ ಇವುಗಳ ನಡುವೆ ಕೆಲವು ಸಾಮ್ಯಗಳೂ ಇವೆ. ಅಂಥ ಒಂದು ಸಮಾನ ಗುಣವೆಂದರೆ ಇಲ್ಲಿಯ ಬಹುತೇಕ ಕತೆಗಳು ಪುಟ್ಟ ಪುಟ್ಟ ಭಾವಗೀತೆಗಳ ಹಾಗಿವೆ. ಇವತ್ತಿನ ಕಾಲದೇಶಗಳಲ್ಲಿ ಇದ್ದೂ ಅದನ್ನು ಮೀರುವ ಹಾಗೂ ಹೇಳಬೇಕಾದ್ದನ್ನು ತಮ್ಮ ಎರಡು ಸಾಲಿನ ನಡುವಿನ ಮೌನದ ಮೂಲಕವೇ ಹೇಳುವ ಆಪ್ತ ಪ್ರಯೋಗ ಈ ಕಥೆಗಳಲ್ಲಿದೆ…
ಬೆಲೆ ರೂ 75/-

ಮತ್ತೊಬ್ಬನ ಸಂಸಾರ
ವಿವೇಕ ಶಾನಭಾಗ
ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ; ಆದರೆ, ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಳ್ಳುವುದು ಕಷ್ಟದ ಹಾದಿ. ವಿವೇಕ ಶಾನಭಾಗ ಅವರ ಈಚಿನ ಕಥೆಗಳು, ಈ ಎರಡನೆಯ ಜಾತಿಯ ದುರ್ಗಮ ದಾರಿಗಳನ್ನು ಹುಡುಕಲು ಹೊರಟಂತಿವೆ. ಉದಾಹರಣೆಗೆ, ಈ ಸಂಕಲನದ ಒಂದು ಕಥೆಯಲ್ಲಿ – ‘ಒಬ್ಬ’ನ ಸಾದಾ ಸಂಸಾರದೊಳಗೆ, ಇದ್ದಕ್ಕಿದ್ದಂತೆ ‘ಮತ್ತೊಬ್ಬ’ನ ನೆರಳು ಕಾಣಿಸತೊಡಗುತ್ತದೆ. ಅದಕ್ಕಿಂತ ಭಿನ್ನವಾದ ಇನ್ನೊಂದು ಕಥೆಯಲ್ಲಿ – ಊರಿಗೆಲ್ಲ ‘ನಿಗೂಢ’ವೆನ್ನಿಸುವಾಕೆ, ಮತ್ತೊಮ್ಮೆ ಏನೂ ವಿಶೇಷವಿಲ್ಲದ ಸಾಧಾರಣ ಹೆಂಗಸೂ ಆಗಿ ಕಾಣಿಸಿಕೊಳ್ಳುತ್ತಾಳೆ. ಅದೇ ರೀತಿ – ಶಾಲಾ ಮಾಸ್ತರ, ಕಿರಾಣಿ ಅಂಗಡಿಯಾತ – ಇಂಥ ಪರಿಚಿತರು ಇಲ್ಲಿ ತಟ್ಟನೆ ಅಪರಿಚಿತರೂ ಆಗಿ ಗೋಚರಿಸತೊಡಗುತ್ತಾರೆ. ಶಿರಸಿ, ಕುಮಟಾ, ಅಂಕೋಲಾದ ಸುತ್ತಮುತ್ತಲೇ ಚಿಗುರುವ ಇಲ್ಲಿಯ ಹಲವು ಕಥನಗಳು, ಹಠಾತ್ತನೆ ತಮ್ಮ ಅದೃಶ್ಯ ಬೇರುಗಳನ್ನು ದೂರದೂರದ ಪುಣೆ-ರಂಗೂನಿನವರೆಗೂ ಹಬ್ಬಿಸಿಕೊಳ್ಳತೊಡಗುತ್ತವೆ. ಇಂಥ ಎಲ್ಲ ಕಥನಕ್ರಮಗಳ ಮೂಲಕ ವಿವೇಕರು ಪ್ರಯತ್ನಿಸುತ್ತಿರುವುದಾದರೂ ಏನನ್ನು? ಮೇಲ್ನೋಟಕ್ಕೆ ಒಂದಾಗಿ ಕಾಣುವ ಗ್ರಹೀತ-ವಾಸ್ತವದಲ್ಲಿ ಕಾಲು ನೆಟ್ಟುಕೊಂಡೇ, ಅದರೊಳಗೆ ಹುದುಗಿರುವ ಸಾಧ್ಯ-ವಾಸ್ತವಗಳನ್ನು ಹುಡುಕುವುದು ಈ ಕಥನದ ಪ್ರೇರಣೆಯಾಗಿರಬಹುದೆ? ಅಥವಾ ಇನ್ನೊಂದು ನೆಲೆಯಿಂದ, ದೇಶದೇಶಗಳ ವ್ಯಾಪಾರೋದ್ಯಮಗಳನ್ನು ಜೋಡಿಸತೊಡಗಿರುವ ಇವತ್ತಿನ ತಥಾಕಥಿತ ‘ಜಾಗತಿಕ’ ವ್ಯವಸ್ಥೆಗೆ ಪ್ರತಿಯಾಗಿ, ಇನ್ನೊಂದು ನೆಲೆಯಲ್ಲಿ ನಡೆಯಬಹುದಾದ ಕಾಲಸಂಶ್ಲೇಷಣೆ ಮತ್ತು ಸ್ಮೃತಿಸಂಶ್ಲೇಷಣೆಗಳನ್ನು ಸೂಚಿಸುವುದು ಈ ಕಥೆಗಳ ಆಶಯವಿದ್ದೀತೆ? ಇಂಥ ಹಲವಾರು ತಾತ್ವಿಕ ಪ್ರಶ್ನೆಗಳನ್ನು ಓದುಗರಲ್ಲಿ ಹುಟ್ಟಿಸಬಲ್ಲ ಸಾಮರ್ಥ್ಯ ಈ ಕಥಾಸಂಕಲನಕ್ಕಿದೆ.
– ಅಕ್ಷರ ಕೆ.ವಿ.
ಬೆಲೆ ರೂ 120/-

ಭಾನುಮತಿಯ ಮುತ್ತುಗಳು
ಸಮುದ್ಯತಾ ವೆಂಕಟರಾಮು
…ಎಲ್ಲವನ್ನೂ ತೂಗಿಸಿಕೊಂಡು, ಸಮತೋಲನಗೊಳಿಸಿಕೊಂಡು ಕಾವ್ಯ ಕಟ್ಟುವುದು ಮತ್ತು ಬದುಕನ್ನು ಕಟ್ಟಿಕೊಳ್ಳುವುದು ಸಮುದ್ಯತಾ ಅವರ ಪ್ರಧಾನ ಹಂಬಲವೆಂದು ತೋರುತ್ತದೆ. ಕಾವ್ಯದಲ್ಲಿ ಭಾವ-ಭಾಷೆಗಳು, ಭಾವುಕತೆ-ಬೌದ್ಧಿಕತೆಗಳು ಜೊತೆಗೂಡಬೇಕು. ಅಭಿವ್ಯಕ್ತಿಯ ಸಫಲತೆಗೆ ಓದುಗನ ಸಹಭಾಗಿತ್ವವೂ ಬೇಕು. ಸಂಸಾರ ಮಧುರವಾಗಿರಲು ಸಂಗಾತಿಗಳ ನಡುವೆ ಹೊಂದಾಣಿಕೆ ಇರಬೇಕು. ಇದೊಂದು ಯಾಂತ್ರಿಕ ಸಮೀಕರಣವಲ್ಲ ಎಂಬುದು ಕವಿಗೆ ಚೆನ್ನಾಗಿ ಗೊತ್ತಿದೆ. ಒಟ್ಟಾಗಿ ಹೆಜ್ಜೆ ಹಾಕುವ ಅಗತ್ಯ-ಅನಿವಾರ್ಯತೆ ಮತ್ತು ಅದರ ಕಷ್ಟಗಳನ್ನು ಒಟ್ಟಿಗೇ ಗಮನಿಸುವ ವ್ಯವಧಾನ ಅವರಿಗಿದೆ. ಹೀಗಾಗಿ ಸಮುದ್ಯತಾ ಅವರ ಕವಿತೆಗಳು ಕೇವಲ ಭಾವದಲ್ಲಿ ಸ್ರವಿಸುವುದಿಲ್ಲ. ಅವುಗಳಲ್ಲಿ ಚಿಂತನೆಯ, ಧ್ಯಾನದ ಆಯಾಮಗಳೂ ಒಂದು ಹದದಲ್ಲಿ ಕರಗಿಕೊಂಡಿವೆ…
– ಟಿ.ಪಿ. ಅಶೋಕ (ಮುನ್ನುಡಿಯಲ್ಲಿ)
ಬೆಲೆ ರೂ 150/-