
ಅಜ್ಜಿ ಕರೆದ ಹಾಗಾಯಿತು
ಸವಿತಾ ನಾಗಭೂಷಣ
ತಮ್ಮ ಕಥೆಗಳ ಮೂಲಕ ಈ ಲೋಕದ ಬಾಲ್ಯಗಳನ್ನು ಬೆಳಗಿಸಿದ ಅಜ್ಜಮ್ಮಂದಿರ ಸಂಪ್ರದಾಯದಿಂದ ಪ್ರೇರಣೆ ಪಡೆದು, ಹೊಸಗಾಲದ ವಸ್ತು-ವಿಚಾರ-ವಿನ್ಯಾಸಗಳನ್ನು ಮನಸ್ಸಲ್ಲಿ ಇಟ್ಟುಕೊಂಡು ಕಟ್ಟಿದ ಮೂವತ್ತು ಕಿರು ಕಥನಗಳು ಇಲ್ಲಿವೆ. ಈ ಕತೆಗಳು ಒಂದೊಂದೂ ಬೇರೆ ಬಗೆಯದೇ ಆಗಿದ್ದರೂ ಇವುಗಳ ನಡುವೆ ಕೆಲವು ಸಾಮ್ಯಗಳೂ ಇವೆ. ಅಂಥ ಒಂದು ಸಮಾನ ಗುಣವೆಂದರೆ ಇಲ್ಲಿಯ ಬಹುತೇಕ ಕತೆಗಳು ಪುಟ್ಟ ಪುಟ್ಟ ಭಾವಗೀತೆಗಳ ಹಾಗಿವೆ. ಇವತ್ತಿನ ಕಾಲದೇಶಗಳಲ್ಲಿ ಇದ್ದೂ ಅದನ್ನು ಮೀರುವ ಹಾಗೂ ಹೇಳಬೇಕಾದ್ದನ್ನು ತಮ್ಮ ಎರಡು ಸಾಲಿನ ನಡುವಿನ ಮೌನದ ಮೂಲಕವೇ ಹೇಳುವ ಆಪ್ತ ಪ್ರಯೋಗ ಈ ಕಥೆಗಳಲ್ಲಿದೆ…
ಬೆಲೆ ರೂ 75/-

ಮತ್ತೊಬ್ಬನ ಸಂಸಾರ
ವಿವೇಕ ಶಾನಭಾಗ
ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ; ಆದರೆ, ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಳ್ಳುವುದು ಕಷ್ಟದ ಹಾದಿ. ವಿವೇಕ ಶಾನಭಾಗ ಅವರ ಈಚಿನ ಕಥೆಗಳು, ಈ ಎರಡನೆಯ ಜಾತಿಯ ದುರ್ಗಮ ದಾರಿಗಳನ್ನು ಹುಡುಕಲು ಹೊರಟಂತಿವೆ. ಉದಾಹರಣೆಗೆ, ಈ ಸಂಕಲನದ ಒಂದು ಕಥೆಯಲ್ಲಿ – ‘ಒಬ್ಬ’ನ ಸಾದಾ ಸಂಸಾರದೊಳಗೆ, ಇದ್ದಕ್ಕಿದ್ದಂತೆ ‘ಮತ್ತೊಬ್ಬ’ನ ನೆರಳು ಕಾಣಿಸತೊಡಗುತ್ತದೆ. ಅದಕ್ಕಿಂತ ಭಿನ್ನವಾದ ಇನ್ನೊಂದು ಕಥೆಯಲ್ಲಿ – ಊರಿಗೆಲ್ಲ ‘ನಿಗೂಢ’ವೆನ್ನಿಸುವಾಕೆ, ಮತ್ತೊಮ್ಮೆ ಏನೂ ವಿಶೇಷವಿಲ್ಲದ ಸಾಧಾರಣ ಹೆಂಗಸೂ ಆಗಿ ಕಾಣಿಸಿಕೊಳ್ಳುತ್ತಾಳೆ. ಅದೇ ರೀತಿ – ಶಾಲಾ ಮಾಸ್ತರ, ಕಿರಾಣಿ ಅಂಗಡಿಯಾತ – ಇಂಥ ಪರಿಚಿತರು ಇಲ್ಲಿ ತಟ್ಟನೆ ಅಪರಿಚಿತರೂ ಆಗಿ ಗೋಚರಿಸತೊಡಗುತ್ತಾರೆ. ಶಿರಸಿ, ಕುಮಟಾ, ಅಂಕೋಲಾದ ಸುತ್ತಮುತ್ತಲೇ ಚಿಗುರುವ ಇಲ್ಲಿಯ ಹಲವು ಕಥನಗಳು, ಹಠಾತ್ತನೆ ತಮ್ಮ ಅದೃಶ್ಯ ಬೇರುಗಳನ್ನು ದೂರದೂರದ ಪುಣೆ-ರಂಗೂನಿನವರೆಗೂ ಹಬ್ಬಿಸಿಕೊಳ್ಳತೊಡಗುತ್ತವೆ. ಇಂಥ ಎಲ್ಲ ಕಥನಕ್ರಮಗಳ ಮೂಲಕ ವಿವೇಕರು ಪ್ರಯತ್ನಿಸುತ್ತಿರುವುದಾದರೂ ಏನನ್ನು? ಮೇಲ್ನೋಟಕ್ಕೆ ಒಂದಾಗಿ ಕಾಣುವ ಗ್ರಹೀತ-ವಾಸ್ತವದಲ್ಲಿ ಕಾಲು ನೆಟ್ಟುಕೊಂಡೇ, ಅದರೊಳಗೆ ಹುದುಗಿರುವ ಸಾಧ್ಯ-ವಾಸ್ತವಗಳನ್ನು ಹುಡುಕುವುದು ಈ ಕಥನದ ಪ್ರೇರಣೆಯಾಗಿರಬಹುದೆ? ಅಥವಾ ಇನ್ನೊಂದು ನೆಲೆಯಿಂದ, ದೇಶದೇಶಗಳ ವ್ಯಾಪಾರೋದ್ಯಮಗಳನ್ನು ಜೋಡಿಸತೊಡಗಿರುವ ಇವತ್ತಿನ ತಥಾಕಥಿತ ‘ಜಾಗತಿಕ’ ವ್ಯವಸ್ಥೆಗೆ ಪ್ರತಿಯಾಗಿ, ಇನ್ನೊಂದು ನೆಲೆಯಲ್ಲಿ ನಡೆಯಬಹುದಾದ ಕಾಲಸಂಶ್ಲೇಷಣೆ ಮತ್ತು ಸ್ಮೃತಿಸಂಶ್ಲೇಷಣೆಗಳನ್ನು ಸೂಚಿಸುವುದು ಈ ಕಥೆಗಳ ಆಶಯವಿದ್ದೀತೆ? ಇಂಥ ಹಲವಾರು ತಾತ್ವಿಕ ಪ್ರಶ್ನೆಗಳನ್ನು ಓದುಗರಲ್ಲಿ ಹುಟ್ಟಿಸಬಲ್ಲ ಸಾಮರ್ಥ್ಯ ಈ ಕಥಾಸಂಕಲನಕ್ಕಿದೆ.
– ಅಕ್ಷರ ಕೆ.ವಿ.
ಬೆಲೆ ರೂ 120/-

ಭಾನುಮತಿಯ ಮುತ್ತುಗಳು
ಸಮುದ್ಯತಾ ವೆಂಕಟರಾಮು
…ಎಲ್ಲವನ್ನೂ ತೂಗಿಸಿಕೊಂಡು, ಸಮತೋಲನಗೊಳಿಸಿಕೊಂಡು ಕಾವ್ಯ ಕಟ್ಟುವುದು ಮತ್ತು ಬದುಕನ್ನು ಕಟ್ಟಿಕೊಳ್ಳುವುದು ಸಮುದ್ಯತಾ ಅವರ ಪ್ರಧಾನ ಹಂಬಲವೆಂದು ತೋರುತ್ತದೆ. ಕಾವ್ಯದಲ್ಲಿ ಭಾವ-ಭಾಷೆಗಳು, ಭಾವುಕತೆ-ಬೌದ್ಧಿಕತೆಗಳು ಜೊತೆಗೂಡಬೇಕು. ಅಭಿವ್ಯಕ್ತಿಯ ಸಫಲತೆಗೆ ಓದುಗನ ಸಹಭಾಗಿತ್ವವೂ ಬೇಕು. ಸಂಸಾರ ಮಧುರವಾಗಿರಲು ಸಂಗಾತಿಗಳ ನಡುವೆ ಹೊಂದಾಣಿಕೆ ಇರಬೇಕು. ಇದೊಂದು ಯಾಂತ್ರಿಕ ಸಮೀಕರಣವಲ್ಲ ಎಂಬುದು ಕವಿಗೆ ಚೆನ್ನಾಗಿ ಗೊತ್ತಿದೆ. ಒಟ್ಟಾಗಿ ಹೆಜ್ಜೆ ಹಾಕುವ ಅಗತ್ಯ-ಅನಿವಾರ್ಯತೆ ಮತ್ತು ಅದರ ಕಷ್ಟಗಳನ್ನು ಒಟ್ಟಿಗೇ ಗಮನಿಸುವ ವ್ಯವಧಾನ ಅವರಿಗಿದೆ. ಹೀಗಾಗಿ ಸಮುದ್ಯತಾ ಅವರ ಕವಿತೆಗಳು ಕೇವಲ ಭಾವದಲ್ಲಿ ಸ್ರವಿಸುವುದಿಲ್ಲ. ಅವುಗಳಲ್ಲಿ ಚಿಂತನೆಯ, ಧ್ಯಾನದ ಆಯಾಮಗಳೂ ಒಂದು ಹದದಲ್ಲಿ ಕರಗಿಕೊಂಡಿವೆ…
– ಟಿ.ಪಿ. ಅಶೋಕ (ಮುನ್ನುಡಿಯಲ್ಲಿ)
ಬೆಲೆ ರೂ 150/-

ತಾಯಿ
ಕೆ.ವಿ. ಸುಬ್ಬಣ್ಣ
ಬ್ರೆಖ್ಟ್ನ ಎಪಿಕ್ ಥೇಟರ್ನ ಕಲ್ಪನೆಯೊಳಗಿನ ಅತ್ಯುನ್ನದ ಮಟ್ಟದ ನಾಟಕ, ೧೯೩೨ರಲ್ಲಿ ಆತ ಬರೆದ ನಾಟಕ ‘ತಾಯಿ’. ಮಾಕ್ಸಿಮ್ ಗಾರ್ಕಿಯ ಅದೇ ಹೆಸರಿನ ವಿಸ್ತಾರವಾದ ಕಾದಂಬರಿ ಈ ನಾಟಕಕ್ಕೆ ಆಧಾರ. ಆದರೆ ಅದರ ಪ್ರತಿಕೃತಿ ಅಲ್ಲ. ಮೂಲದ ಭಾವನಾತ್ಮಕ ಆವೇಶಕ್ಕೆ ಇಲ್ಲಿ ಸ್ಥಾನವಿಲ್ಲ…
‘ತಾಯಿ’ಯ ಕಥಾವಸ್ತು ೧೯೦೫ರ ಕ್ರಾಂತಿಯತ್ನದಿಂದ ಆರಂಭಿಸಿ ೧೯೧೭ರ ನಿಜಕ್ರಾಂತಿಯತನಕ ಹರಹಿಕೊಳ್ಳುತ್ತದೆ. ಗಾರ್ಕಿಯ ತಾಯಿ ಇಡೀ ರಷ್ಯಾವನ್ನು ಪ್ರತಿನಿಧಿಸುತ್ತಾಳೆ. ಕಮ್ಯುನಿಸಮ್ನ ಪರಿಚಯವಾದಾಗ ಅವಳಿಗಾಗುವ ಭಯ, ಆತಂಕ, ಅಭದ್ರತೆ, ಅನುಮಾನಗಳು ಇಡೀ ರಷ್ಯಾಕ್ಕೇ ಆದದ್ದು. ಗಾರ್ಕಿಯ ಈ ಪಾತ್ರ ಬ್ರೆಖ್ಟ್ನಲ್ಲಿ ಕಾಲದೇಶಗಳ ಎಲ್ಲ ಮಿತಿಗಳನ್ನೂ ಮೀರಿ ನಿಲ್ಲುತ್ತದೆ. ನಾಟಕದ ತಾಯಿ, ಎಲ್ಲ ಜನತೆಯ ನೋವು, ಕಳಕಳಿಗಳನ್ನು ಪ್ರತಿನಿಧಿಸುತ್ತಾಳೆ. ಅವಳ ಬದಲಾವಣೆಗಳು ಎಲ್ಲ ಶೋಷಿತ ಜನಾಂಗಗಳ ಹೊಸ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತವೆ… ದಲಿತರು, ಶೋಷಿತರು ಎಚ್ಚೆತ್ತುಕೊಳ್ಳುತ್ತಿರುವ ಸಂದರ್ಭಗಳಲ್ಲೆಲ್ಲ ‘ತಾಯಿ’ ನಾಟಕ ಪ್ರಕೃತವಾಗುತ್ತದೆ; ಆ ಮಣ್ಣಿನದೇ ಎಂಬಂತೆ ರೂಪ ಪಡೆದುಕೊಳ್ಳುತ್ತದೆ…
ಈ ಶಕ್ತಿವಂತ ನಾಟಕದ ಸಮರ್ಥ ಅನುವಾದ ಇಲ್ಲಿದೆ.
ಬೆಲೆ ರೂ 140/-

ಸೆಜುವಾನ್ ನಗರದ ಸಾಧ್ವಿ
ಕೆ.ವಿ. ಸುಬ್ಬಣ್ಣ
ಬ್ರೆಖ್ಟ್ ೧೯೩೮-೪೦ರ ಅವಧಿಯಲ್ಲಿ ಬರೆದ ‘ಸೆಜುವಾನ್ ನಗರದ ಸಾಧ್ವಿ’ ೧೯೪೩ರಲ್ಲಿ ಮೊದಲು ಪ್ರದರ್ಶನಗೊಂಡಿತು. ಎಪಿಕ್ ಶೈಲಿಯನ್ನು ವಿಶದಗೊಳಿಸುವ ಮುಖ್ಯ ನಾಟಕಗಳಲ್ಲಿ ಇದೊಂದು. ಕಥೆ ಚೀನಾದಲ್ಲಿ ನಡೆದಂತೆ ಚಿತ್ರಿತವಾಗಿದ್ದರೂ ಈ ನಾಟಕ ಬಹುಮಟ್ಟಿಗೆ ಕಾಲದೇಶಗಳ ಬದ್ಧತೆಯನ್ನು ಮೀರಿಕೊಂಡದ್ದು…
ಸಮಾಜದ ಕೆಳಸ್ತರದಲ್ಲಿರುವ ವ್ಯಕ್ತಿಯೊಬ್ಬಳು ಒಳ್ಳೆಯವಳಾಗಿದ್ದುಕೊಂಡು ಅಕ್ಕಪಕ್ಕದವರಿಗೆ ಒಳ್ಳೆಯದು ಮಾಡುತ್ತ, ಪ್ರೀತಿಗಾಗಿ ಹಂಬಲಿಸುತ್ತ, ತನ್ನ ಕೂಸಿನ ಬದುಕು ತನ್ನದಕ್ಕಿಂತ ಉತ್ತಮವಾಗಬೇಕೆಂದು ಹಾರೈಸುತ್ತ ತನ್ನ ಪರಿಸರದ ಕಹಿಕೋಟಲೆ ಹಿಂಸೆಗಳ ದೆಸೆಯಿಂದ ವಿಫಲಳಾಗುವುದೇ ಈ ನಾಟಕದ ವಸ್ತು. ಸಾಧ್ವಿಯಾಗಿ ಬದುಕುವುದು ದುಸ್ಸಾಧ್ಯವಾದಾಗ ಶೆನ್ತೆ, ನಿಷ್ಠುರ ಮನಸ್ಸಿನ ಶುಯಿತಾನ ಮುಖವಾಡ ತೊಡುತ್ತಾಳೆ. ಕ್ರಮೇಣ ಆಕೆಗೆ ಶುಯಿತಾನ ಮುಖವಾಡವೇ ಹೆಚ್ಚು ಹೆಚ್ಚು ಅಗತ್ಯವಾಗುತ್ತ ಹೋಗುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯವರಾಗಿ ಉಳಿಯುವುದು ಹೇಗೆ? ಎಂದು ಬ್ರೆಖ್ಟ್ ನಮ್ಮನ್ನೇ ಪ್ರಶ್ನಿಸುತ್ತಾನೆ; ನಮ್ಮನ್ನು ಯೋಚಿಸಲು ಹಚ್ಚುತ್ತಾನೆ…
ಈಗಾಗಲೇ ಹಲವು ರಂಗ ಪ್ರಯೋಗಗಳಲ್ಲಿ ಸಮರ್ಥವೆನಿಸಿಕೊಂಡಿರುವ ಅನುವಾದ ಇಲ್ಲಿದೆ.
ಬೆಲೆ ರೂ 180/-

ಉಲಿಯ ಉಯ್ಯಾಲೆ
ರಾಧಾಕೃಷ್ಣ ಕಲ್ಚಾರ್
ಕೂಡುವ ಭಂಗಿಯಿಂದ ತೊಡಗಿ ಕೊಡುವ ವ್ಯಾಖ್ಯಾನದವರೆಗೂ ತಮ್ಮದೇ ವಿಶೇಷ ಛಾಪನ್ನು ರೂಪಿಸಿಕೊಂಡ ತಾಳಮದ್ದಲೆಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ತಮ್ಮ ಕಲಾಯಾತ್ರೆಯ ಹಲವು ನೋಟಗಳನ್ನು ಈ ಬರಹದಲ್ಲಿ ಚಿತ್ರಿಸಿದ್ದಾರೆ. ಒಂದು ಕಡೆಯಿಂದ ಇದು ಕಲಾವಿದನೊಬ್ಬನ ಆತ್ಮಕಥನ – ಹಳ್ಳಿಯ ಸಾದಾ ಹುಡುಗನೊಬ್ಬ ಪುರಾಣದ ಪಾತ್ರವಿಸ್ಮಯಗಳಿಂದ ಮರುಳಾಗಿ ಸತತ ವ್ಯವಸಾಯದ ಮುಖಾಂತರ ಈ ಜಿಜ್ಞಾಸೆಯ ಮಾಧ್ಯಮಕ್ಕೆ ಪ್ರವೇಶ ಪಡೆದ ವೃತ್ತಾಂತ ಇಲ್ಲಿದೆ. ಇನ್ನೊಂದೆಡೆ, ಇದು ಆ ಮಾಧ್ಯಮದ ಒಳಗಿನ ಕಥನ – ಅರ್ಥಧಾರಿಯೊಬ್ಬ ತನ್ನ ಸಂಪ್ರದಾಯದೊಳಗೆ ಸಿಕ್ಕ ಹಿರಿಕಿರಿಯರ ವೈವಿಧ್ಯಮಯ ಮಾರ್ಗಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅವರೊಂದಿಗಿನ ಕೊಡುಕೊಳೆಯ ಸಂಬಂಧದೊಳಗೆ ತನ್ನ ರೂಪುರೇಷೆಗಳನ್ನು ನಿರ್ಮಿಸಿಕೊಂಡ ಶೈಕ್ಷಣಿಕ ಕಥೆಯೂ ಇಲ್ಲಿದೆ.
– ಅಕ್ಷರ ಕೆ.ವಿ.
ಬೆಲೆ ರೂ 170/-

ನೆನಪು ಅನಂತ
ಎಸ್ತರ್ ಅನಂತಮೂರ್ತಿ
ನಿರೂಪಣೆ: ಪೃಥ್ವೀರಾಜ ಕವತ್ತಾರು
…ಮೇಷ್ಟ್ರು ಸದಾ ಸಮಾನತೆಯ ಬುನಾದಿಯ ಮೇಲಿನ ಪ್ರಜಾಪ್ರಭುತ್ವದ ಆದರ್ಶ ಸಮಾಜದ ಕನಸುಗಾರರು. ಸಂಸಾರ ಲೌಕಿಕ ಜವಾಬ್ದಾರಿಯನ್ನು ಬೇಡುವ ವಾಸ್ತವ. ಮೇಷ್ಟರೊಡನೆ ಅವರ ಓದು ಬರಹದ ನಿರಂತರ ಧ್ಯಾನಗಳಿಗೆ ತೊಂದರೆ ಆಗದಂತೆ ಕುಟುಂಬವನ್ನು ಬೆಳೆಸಿದ ಜೀವಪ್ರೀತಿಯ ಕಥನವಿದು…
ಎಸ್.ಆರ್. ವಿಜಯಶಂಕರ
…ಪ್ರಸಿದ್ಧರ ಪತ್ನಿಯ ಏಳುಬೀಳುಗಳ ಮಾಮೂಲಿ ಕಥನವಾಗದೆ, ಏನೆಂಥ ಹೊತ್ತಿನಲ್ಲೂ ಹೆಣ್ಣಿನ ಆಯ್ಕೆ ಮತ್ತು ಆದ್ಯತೆಗಳು ಕುಟುಂಬವನ್ನು ಉಳಿಸಿ, ಬೆಳೆಸುತ್ತ, ಪೊರೆಯುವುದೇ ಆಗಿರುತ್ತವೆ ಎನ್ನುವುದನ್ನು ಈ ಕಥನ ಹೇಳುತ್ತದೆ. ಆದರೆ, ಇದು ಮಿತಿಯಲ್ಲ, ಇದಕ್ಕೂ ಕೊನೆಯಿಲ್ಲದ ತಾಳ್ಮೆ ಮತ್ತು ಶಕ್ತಿ ಬೇಕು. ಇದರಾಚೆಗೆ ಅನ್ನೋನ್ಯ ಸಖ್ಯದ ಸಂಭ್ರಮ ಮತ್ತು ಬಿಕ್ಕಟ್ಟುಗಳನ್ನೂ ಇದು ಧ್ವನಿಸುತ್ತದೆ…
ಎಂ. ಎಸ್. ಆಶಾದೇವಿ
ಬೆಲೆ ರೂ 180/-