
ಮಾಯದ ಕನ್ನಡಿ
ಅಕ್ಷರ ಕೆ.ವಿ.
ಲೇಖನ ಸಮುಚ್ಚಯ
ಜಾತ್ರೆಗಳಲ್ಲಿ `ನಗಿಸುವ ಕನ್ನಡಿ’ ಎಂದು ನಿಮ್ನಪೀನಾದಿ ಕನ್ನಡಿಗಳನ್ನಿಟ್ಟು ನಮ್ಮನ್ನೇ ನಾವು ಹೊಸ ರೂಪದಲ್ಲಿ ನೋಡಿಕೊಳ್ಳುವಂತೆ ಮಾಡುತ್ತಾರಲ್ಲವೇ, ಹಾಗೆಯೇ ಈ ಪುಸ್ತಕದಲ್ಲಿನ ಬರಹಗಳು ಜಗತ್ತನ್ನು ನಮಗೆ ಹಲಬಗೆಯ ಕಿಟಕಿ, ಕನ್ನಡಿ, ಮಸೂರಗಳ ಮುಖಾಂತರ ಕಾಣಿಸುತ್ತವೆ. ಇಲ್ಲಿರುವ ದೀರ್ಘ ಲೇಖನಗಳಲ್ಲಿ ರಸಾಯನ ಶಾಸ್ತ್ರದಿಂದ ರಸಸಿದ್ಧಾಂತದವರೆಗೆ, ರಾಜಕೀಯದಿಂದ ದರ್ಶನದವರೆಗೆ ಹಲವು ಕನ್ನಡಿಗಳಿದ್ದರೆ ಸಣ್ಣ ಲೇಖನಗಳಲ್ಲಿ ಒಂದೋ ಎರಡೋ ಕನ್ನಡಿಗಳು ಮಾತ್ರ ಕಾಣುತ್ತವೆ. ದೀರ್ಘ-ಹೃಸ್ವ ಲೇಖನಗಳ ನಡುವೆ ಇರುವ ವ್ಯತ್ಯಾಸ ವ್ಯಾಪ್ತಿಯಲ್ಲಿಯೇ ಹೊರತು ಗುಣದಲ್ಲಲ್ಲ. ಆಧುನಿಕೋತ್ತರವಾದದ ಅಂಚಿಗೆ ಕರೆದೊಯ್ದು ಕೆಲಕಾಲ ನಿಲ್ಲಿಸಿ ಅಲ್ಲಿಂದ ಅದಲ್ಲದ ಮತ್ತಾವುದೋ ದಾರಿಯಲ್ಲಿ ಹಿಂತಿರುಗಿ ಕರೆತರುವ ಅಕ್ಷರ ಅವರು ತಮ್ಮದೇ ಆದ ದರ್ಪಣವೊಂದರ ಮುಖಾಂತರ ಜಗತ್ತನ್ನು ನೋಡುತ್ತಿದ್ದಾರೆ ಅನ್ನಿಸುವ ಹೊತ್ತಿಗೇ ನಮ್ಮನಮ್ಮ ದರ್ಪಣಗಳ ಕುರಿತು ಓದುಗರಾದ ನಾವೂ ಎಚ್ಚರವಾಗಿರುವಂತೆ ಮಾಡುತ್ತಾರೆ.
– ಮಾಧವ ಚಿಪ್ಪಳಿ
ಬೆಲೆ ರೂ 250/-

ಯೂರಿಪಿಡೀಸ್ ಮೂರು ನಾಟಕಗಳು
ಮಾಧವ ಚಿಪ್ಪಳಿ
ಯೂರಿಪಿಡೀಸ್ ಮೂರು ನಾಟಕಗಳು: ಅಲ್ಸೆಸ್ಟಿಸ್ | ಔಲಿಸ್ನಲ್ಲಿ ಇಫಿಜೀನಿಯಾ | ಮೀಡಿಯಾ
ಪ್ರಾಚೀನ ಗ್ರೀಕ್ ನಾಟಕಕೃತಿಗಳು ಪಾಶ್ಚಿಮಾತ್ಯ ರಂಗಭೂಮಿಯ ಮುಕುಟಮಣಿಗಳು ಮಾತ್ರವಲ್ಲ ಅನ್ಯಸಂಸ್ಕೃತಿಯ ಹಲ್ಲುಗಳಿಗೆ ಕಷ್ಟ ಕೊಡುವ ಕಬ್ಬಿಣದ ಕಡಲೆಗಳೂ ಹೌದು. ಅನುವಾದದಿಂದ ತೊಡಗಿ ರಂಗಪ್ರಯೋಗದವರೆಗೂ ಇವು ಅಸಾಮಾನ್ಯ ಸವಾಲುಗಳನ್ನೊಡ್ಡುತ್ತವೆ. ಅಂಥ ಸವಾಲುಗಳನ್ನೆದುರಿಸುತ್ತ ಇಂಗ್ಲೀಷಿನಂಥ ಜಾಗತಿಕ ಭಾಷೆಯೂ ಆಗಾಗ ಆ ನಾಟಕಗಳ ಹೊಸ ಅನುವಾದಗಳನ್ನೂ ರಂಗಪ್ರಯೋಗಗಳನ್ನೂ ಮಾಡಿಕೊಳ್ಳುತ್ತ ಬಂದಿದೆ. ಈ ಸಂಕಲನವು ಇವತ್ತಿನ ಕನ್ನಡದ ಸಂದರ್ಭದಲ್ಲಿ ಕಾಲೂರಿಕೊಂಡು ಅಂಥ ಅನುಸಂಧಾನದ ಸವಾಲನ್ನು ಮೈಮೇಲೆ ಎಳೆದುಕೊಂಡಿದೆ. ಇದುವರೆಗೂ ಕನ್ನಡದಲ್ಲಿ ಬಂದಿರುವ ಗ್ರೀಕ್ ನಾಟಕ ಅನುವಾದಗಳಿಗಿಂತ ಭಿನ್ನವಾಗಿ, ಪ್ರಸ್ತುತ ಭಾಷಾಂತರವು ಅಲ್ಲಲ್ಲಿ ಛಂದೋಬದ್ಧ ಲಯಗಳನ್ನು ಬಳಸುವ ಪ್ರಯೋಗ ಮಾಡಿದೆ; ಆಡುಮಾತಿಗೆ ಹತ್ತಿರವಿರುವ ಹೊಸಗನ್ನಡದೊಳಗೂ ಕಾವ್ಯದ ಧ್ವನಿಯನ್ನು ಕಟ್ಟಲು ಪ್ರಯತ್ನಿಸಿದೆ. ಇಂಥ ಕ್ರಿಯಾಶೀಲ ಆಮದು ವ್ಯಾಪಾರವು ಹೊರನಾಡಿನ ಹೊಸತನವನ್ನು ಅರಿಯಲಿಕ್ಕೆ ಮಾತ್ರವಲ್ಲ, ಸ್ವದೇಶದ ಸ್ವಂತಿಕೆಯನ್ನು ಕಾಣಿಸಿಕೊಡಲೂ ತುಂಬ ಉಪಯುಕ್ತ.
ಅಕ್ಷರ ಕೆ.ವಿ.
ಬೆಲೆ ರೂ 235/-

ಕ್ರೌಂಚ ಪಕ್ಷಿಗಳು
ವೈದೇಹಿ
ಕನ್ನಡದ ಪ್ರಮುಖ ಕಥೆಗಾರ್ತಿ ವೈದೇಹಿ ಅವರ ಹೊಸ ಹುಡುಕಾಟಗಳನ್ನು ದಾಖಲಿಸುವ ಸಂಕಲನ ಇದು. ಈ ಎಲ್ಲ ಕಥೆಗಳ ಹಿಂದೆ ‘ಗಂಡು’ ‘ಹೆಣ್ಣು’ಗಳು ಕೂಡಿರುವ ಒಂದು ಲೋಕವಿದೆ; ಆ ಲೋಕದಲ್ಲಿ ಮಿಥುನವಿರುವಂತೆಯೇ ವಿಚ್ಛೇದವೂ ಇದೆ; ಸ್ವಾರಸ್ಯದ ಮಾತುಗಾರಿಕೆಯಿರುವಷ್ಟೇ ಗಾಢವಾದ ವಿಷಾದದ ಮಂದ್ರಸ್ಥಾಯಿಯೂ ಇದೆ. ಇಲ್ಲಿ ಉಲ್ಲಾಸದ ಉಬ್ಬರ ಕೆಲವೊಮ್ಮೆ ಮೊರೆದು ಕಾಣಿಸಿಕೊಂಡರೆ ಕೆಲವೊಮ್ಮೆ ಹಿಂಸೆಯ ನೆರಳು ಚಾಚಿಕೊಳ್ಳುತ್ತದೆ. ಪಾತ್ರಗಳಲ್ಲಿ ಸನ್ನಿವೇಶಗಳಲ್ಲಿ ಮತ್ತು ಇಡಿಯ ಕಥನ ಕ್ರಮದಲ್ಲಿ ಹೀಗೆ, ವಿರುದ್ಧಭಾವಗಳನ್ನು ಮಿಥುನಗೊಳಿಸಿ ಕಾಣಿಸುವ ಒಂದು ವಿಶಿಷ್ಟ ಕಲೆಗಾರಿಕೆ ಪ್ರಾಯಶಃ ವೈದೇಹಿಯವರ ಈ ಕಥೆಗಳಲ್ಲಿ ಪ್ರಮುಖವಾದದ್ದು. ಆದ್ದರಿಂದಲೇ, ‘ಕ್ರೌಂಚ ಪಕ್ಷಿಗಳು’ ಎಂಬುದು ಈ ಸಂಕಲನದ ಒಂದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನಕ್ರಮದ ಒಂದು ಆದಿಪ್ರತಿಮ.
ಬೆಲೆ ರೂ 120/-

ಕೆ.ವಿ. ಸುಬ್ಬಣ್ಣ ಮಕ್ಕಳ ನಾಟಕಗಳು
ಕೆ.ವಿ. ಸುಬ್ಬಣ್ಣ
೪ ನಾಟಕಗಳು: ಕಾಡಿನಲ್ಲಿ ಕಥೆ, ಅಂಚೆಮನೆ, ಬೆಟ್ಟಕ್ಕೆ ಚಳಿಯಾದರೆ, ಜಯಂಟ್ ಮಾಮಾ
ಕೆ.ವಿ. ಸುಬ್ಬಣ್ಣನವರು ರಚಿಸಿದ ನಾಲ್ಕು ಮಕ್ಕಳ ನಾಟಕಗಳು ಈ ಸಂಕಲನದಲ್ಲಿ ಪ್ರಕಟಗೊಳ್ಳುತ್ತಿವೆ. ಬಹಳ ಹಿಂದೆ, ಬೇರೆಬೇರೆ ಸಂದರ್ಭಗಳಲ್ಲಿ ಪ್ರಯೋಗಕ್ಕೆಂದೇ ರಚಿತವಾದ ಈ ನಾಟಕಗಳು ಬಿಡಿಬಿಡಿಯಾಗಿ ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಒಗ್ಗೂಡಿ ಪ್ರಕಟಗೊಳ್ಳುತ್ತಿವೆ. ಇವತ್ತಿನ ಕಾಲದ ಮಕ್ಕಳ ಓದಿಗೂ, ರಂಗಪ್ರಯೋಗಗಳಿಗೂ ಮತ್ತು ರಂಗಭೂಮಿ ಕುರಿತ ಅಧ್ಯಯನಕ್ಕೂ ಈ ಸಂಕಲನ ಉಪಯುಕ್ತವಾದೀತು.
ಬೆಲೆ ರೂ 220/-

ಬಿ.ವಿ. ಕಾರಂತ ಮಕ್ಕಳ ನಾಟಕಗಳು
ಬಿ.ವಿ. ಕಾರಂತ
೩ ನಾಟಕಗಳು: ಪಂಜರ ಶಾಲೆ, ಹೆಡ್ಡಾಯಣ, ನೀಲಿ ಕುದುರೆ
ಬಿ.ವಿ. ಕಾರಂತರು ಬಹಳ ಹಿಂದೆಯೇ ಬರೆದು ಪ್ರಯೋಗಿಸಿದ್ದ, ಮತ್ತು ಪ್ರದರ್ಶನಗಳಲ್ಲಿ ಪ್ರಸಿದ್ಧವೂ ಆಗಿದ್ದ ಮೂರು ನಾಟಕಗಳು ಇಲ್ಲೀಗ ಒಟ್ಟಾಗಿ ಪ್ರಕಟಗೊಳ್ಳುತ್ತಿವೆ. ಮೊದಲನೆಯ ನಾಟಕ ಪಂಜರಶಾಲೆಯು ರವೀಂದ್ರನಾಥ ಟಾಗೋರ್ ಅವರ ಕಥೆ ಆಧರಿಸಿದ್ದು; ಎರಡನೆಯ ನಾಟಕ ಹೆಡ್ಡಾಯಣವು ಪಂಜೆ ಮಂಗೇಶರಾಯರ ಕಥೆಯನ್ನು ನೆನಪಿಸಿಕೊಂಡು ಬರೆದದ್ದು. ಮೂರನೆಯ ನಾಟಕ ನೀಲಿಕುದುರೆಯು ಪೋರ್ಚುಗೀಸ್ ಮೂಲವೊಂದರಿಂದ ಪ್ರೇರಿತವಾದದ್ದು. ಬಿ.ವಿ. ಕಾರಂತರ ರಂಗಮಾರ್ಗವನ್ನು ಪ್ರತಿನಿಧಿಸುವ ಈ ಸಂಕಲನವು ಪ್ರಯೋಗಕಾರರಿಗೂ ಸಂಶೋಧಕರಿಗೂ ಉಪಯುಕ್ತ.
ಬೆಲೆ ರೂ 140/-

ವೈದೇಹಿ ಮಕ್ಕಳ ನಾಟಕಗಳು
ವೈದೇಹಿ
೧೭ ನಾಟಕಗಳು: ಸೋಮಾರಿ ಓಲ್ಯಾ, ಆನೆ ಬಂತೋ ಆನೆ, ಕೋಟು ಗುಮ್ಮ, ಅರ್ಧಚಂದ್ರ ಮಿಠಾಯಿ, ನಾಯಿಮರಿ ನಾಟಕ, ಢಾಣಾ ಡಂಗುರ, ಸೂರ್ಯ ಬಂದ, ಝುಂ ಝಾಂ ಆನೆ ಮತ್ತು ಪುಟ್ಟ, ಹಕ್ಕಿ ಹಾಡು, ಸತ್ರು ಅಂದ್ರೆ ಸಾಯ್ತಾರ?, ಅಣಿಲು ರಾಮಾಯಣ, ಹೂಂ ಅಂದ ಊಹೂಂ ಅಂದ, ಗೆದ್ದಲು ಪಂಡಿತರು, ರಾಜಾ ಲಿಯರ್, ಗೊಂಬೆ ಮ್ಯಾಕ್ಬೆತ್, ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು.
ವೈದೇಹಿಯವರು ಬೇರೆಬೇರೆ ಸಂದರ್ಭಗಳಲ್ಲಿ ರಚಿಸಿದ ಒಟ್ಟು ಹದಿನೇಳು ಮಕ್ಕಳ ನಾಟಕಗಳು ಇದೀಗ ಇಲ್ಲಿ ಒಟ್ಟಾಗಿ ಪ್ರಕಟಗೊಳ್ಳುತ್ತಿವೆ. ಈ ನಾಟಕಗಳಲ್ಲಿ ಪುಟ್ಟ ಮಕ್ಕಳಿಂದ ತೊಡಗಿ ಹಿರಿಯ ಮಕ್ಕಳವರೆಗಿನ ವಿಭಿನ್ನ ವಯೋಮಾನದವರಿಗೆ ಹೊಂದುವ ನಾಟಕಗಳಿದ್ದಾವೆ. ಬಿಡಿ ಕಥೆ-ಕವನಗಳಿಂದ ಪ್ರೇರಿತವಾಗಿ ರಚಿತವಾದ ನಾಟಕಗಳಿಂದ ತೊಡಗಿ ಮಹಾಕವಿ ಶೇಕ್ಸ್ಪಿಯರ್ನ ನಾಟಕಗಳಿಂದ ಪ್ರೇರಿತವಾದ ಕೃತಿಗಳೂ ಇದ್ದಾವೆ. ಬೇರೆಬೇರೆ ಕಡೆಗಳಲ್ಲಿ ಪ್ರಯೋಗಗೊಂಡು ಯಶಸ್ವಿಯೂ ಆಗಿರುವ ಈ ನಾಟಕಗಳ ಗುಚ್ಛವು ಕಿರಿಯ-ಹಿರಿಯ ಓದುಗರಿಗೂ, ಪ್ರಯೋಗಕಾರರಿಗೂ ಮತ್ತು ಅಭ್ಯಾಸಿಗಳಿಗೂ ಉಪಯುಕ್ತ.
ಬೆಲೆ ರೂ 635/-

ಮಾಯಾದರ್ಪಣ
ಎಂ.ಎಸ್. ಶ್ರೀರಾಮ್
ತರುಣ ಲೇಖಕರಾದ ಎಂ ಎಸ್ ಶ್ರೀರಾಮ್ ಅವರ ಕತೆಗಳ ಸಂಕಲನ `ಮಾಯಾದರ್ಪಣ’ದಲ್ಲಿ ೧೩ ಕತೆಗಳಿವೆ; ತರುಣ ಬರಹಗಾರನೊಬ್ಬನ ಉತ್ಸಾಹ, ತಿಕ್ಕಲುತನ ತೋರುವ ಜೊತೆಗೇ ಈ ಕತೆಗಳು ತರುಣರ ಬೆಚ್ಚನೆಯ ಭಾವವನ್ನೂ ತೋರುತ್ತವೆ. ಇವೆಲ್ಲಕಿಂತ ಹೆಚ್ಚಾಗಿ ನಿಜಕ್ಕೂ ಸಾಹಿತಿಯಾದವನು ತಾರುಣ್ಯದಲ್ಲಿ ತೋರಲೇಬೇಕಾದ ನುಡಿಗಟ್ಟಿನ ಹೊಸತನ, ನೋಟದ ಹೊಸತನ ತೋರುತ್ತವೆ,
ಪಿ ಲಂಕೇಶ್
ಶ್ರೀರಾಮ್ ಅವರ ಎಲ್ಲ ಕತೆಗಳೂ ಕುತೂಹಲದಿಂದ ಓದಿಸಿಕೊಂಡು ಹೋಗುವುದರ ಜೊತೆಗೆ ಬದುಕಿನ ಸೂಕ್ಷ್ಮಗಳನ್ನು ಹೊಳೆಯಿಸುತ್ತವೆ. ಹಾಗೂ ಇಂದಿನ ಮೌಲ್ಯಗಳ ಕುಸಿತದ ಬಗ್ಗೆಯೂ ನಮ್ಮನ್ನು ಗಾಢವಾಗಿ ಚಿಂತನೆಯಲ್ಲಿ ತೊಡಗಿಸುತ್ತವೆ. ನಮ್ಮ ತರುಣ ಲೇಖಕರಿಂದ ಇಂತಹ ಉತ್ಕೃಷ್ಟ ಪ್ರಯೋಗಗಳು ಇನ್ನೂ ನಡೆಯುತ್ತಿರುವಾಗ ನವ್ಯ ಕತೆಗಳ ಪರಂಪರೆಗೆ ಭರತವಾಕ್ಯ ಹಾಡುವುದು ಅಕಾಲಿಕವೆನ್ನಿಸದಿರದು. ನವ್ಯತೆಯ ಒಂದು ಹೊಸ ಅಲೆಯ ಹುಟ್ಟಿನ ಅನುಭವವನ್ನು ತರುವ `ಮಾಯಾದರ್ಪಣ’ ಒಂದು ಸ್ವಾಗತಾರ್ಹ ಕೃತಿ.
ಕೆ ನರಸಿಂಹಮೂರ್ತಿ
ಬೆಲೆ ರೂ 200/-

ಒಳ್ಳೆಯವನು
ಅಶೋಕ ಹೆಗಡೆ
…ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಎತ್ತಿ ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದುಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು; ಎಲ್ಲರ ನೋವು, ನಲಿವು, ಸಡಗರ ಮತ್ತು ಇದೆಲ್ಲದರ ಮಧ್ಯವೂ ಅರಳುವ ಬದುಕಿನ ಮಳೆಯ ಹಾತೆಯ ಒಂದು ಕ್ಷಣವನ್ನ ಹಿಡಿದಿಡಲು ಮೀಸಲಿಟ್ಟ ಈ ಕ್ಷಣವೊಂದು ನಿನ್ನನ್ನು ತಲುಪುವಲ್ಲಿ ಮಾತ್ರ ಧನ್ಯವಾಗಬಲ್ಲದು…
ಬೆಲೆ ರೂ 175/-

ಅಜ್ಜಿ ಕರೆದ ಹಾಗಾಯಿತು
ಸವಿತಾ ನಾಗಭೂಷಣ
ತಮ್ಮ ಕಥೆಗಳ ಮೂಲಕ ಈ ಲೋಕದ ಬಾಲ್ಯಗಳನ್ನು ಬೆಳಗಿಸಿದ ಅಜ್ಜಮ್ಮಂದಿರ ಸಂಪ್ರದಾಯದಿಂದ ಪ್ರೇರಣೆ ಪಡೆದು, ಹೊಸಗಾಲದ ವಸ್ತು-ವಿಚಾರ-ವಿನ್ಯಾಸಗಳನ್ನು ಮನಸ್ಸಲ್ಲಿ ಇಟ್ಟುಕೊಂಡು ಕಟ್ಟಿದ ಮೂವತ್ತು ಕಿರು ಕಥನಗಳು ಇಲ್ಲಿವೆ. ಈ ಕತೆಗಳು ಒಂದೊಂದೂ ಬೇರೆ ಬಗೆಯದೇ ಆಗಿದ್ದರೂ ಇವುಗಳ ನಡುವೆ ಕೆಲವು ಸಾಮ್ಯಗಳೂ ಇವೆ. ಅಂಥ ಒಂದು ಸಮಾನ ಗುಣವೆಂದರೆ ಇಲ್ಲಿಯ ಬಹುತೇಕ ಕತೆಗಳು ಪುಟ್ಟ ಪುಟ್ಟ ಭಾವಗೀತೆಗಳ ಹಾಗಿವೆ. ಇವತ್ತಿನ ಕಾಲದೇಶಗಳಲ್ಲಿ ಇದ್ದೂ ಅದನ್ನು ಮೀರುವ ಹಾಗೂ ಹೇಳಬೇಕಾದ್ದನ್ನು ತಮ್ಮ ಎರಡು ಸಾಲಿನ ನಡುವಿನ ಮೌನದ ಮೂಲಕವೇ ಹೇಳುವ ಆಪ್ತ ಪ್ರಯೋಗ ಈ ಕಥೆಗಳಲ್ಲಿದೆ…
ಬೆಲೆ ರೂ 75/-