Description
೧೯೩೦ರ ದಶಕದ ಭಾರತದ ಇತಿಹಾಸದ ಮೂರು ವಿರಾಟ್ ಕಥನಗಳನ್ನು ಪರಿಶೀಲಿಸುವ ಒಂದು ಪ್ರಯತ್ನವನ್ನು ಈ ನಾಟಕ ಕೈಗೆತ್ತಿಕೊಂಡಿದೆ. ಹಾಗಂತ ನಾಟಕಕಾರರಿಗೆ ಈ ಕಾಲದ ಇತಿಹಾಸದ ಒಂದು ಅಧಿಕೃತ ಚಿತ್ರಣ ನೀಡುವುದರಲ್ಲೇನೂ ಆಸಕ್ತಿ ಇಲ್ಲ; ಬದಲು, ರಘುನಂದನ ಅವರ ನಾಟಕದ ಕೇಂದ್ರ ಕಾಳಜಿಯು, ಇಂಥ ಇತಿಹಾಸದ ಪ್ರಮುಖ ಘಟನಾವಳಿಗಳು ಹೇಗೆ ಸಾಧಾರಣ ಬದುಕನ್ನೂ ಪ್ರಭಾವಿಸಿವೆ ಎಂಬುದನ್ನು ಗ್ರಹಿಸುವುದು. ಮತ್ತು, ಇಂಥ ಘಟನೆಗಳನ್ನು ತಮ್ಮದೇ ಮಿತಾಕಾಂಕ್ಷೆ ಮತ್ತು ಘನತೆಗಳೊಂದಿಗೆ ಬದುಕುವ ಸಾದಾ ಜನರು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಗುರುತಿಸುವುದು ಈ ನಾಟಕದ ಕಾಳಜಿ. ಇತಿಹಾಸ ಎಂದರೆ ಅಂಥ ಜನರಿಗೆ ಯಾವುದು? ಮೇಲ್ನೋಟಕ್ಕೆ ರಾಜಕೀಯ-ವಿಮುಖರೆಂದು ಕಾಣುವ ಈ ಬಗೆಯ ಜನಗಳ ನಿಜರಾಜಕಾರಣ ಯಾವ ಬಗೆಯದು? ಇಂಥ ಇತಿಹಾಸದ ನಿರ್ದಿಷ್ಟ ಸಂದರ್ಭದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬ ಹೇಗೆ ತನ್ನ ವೈಯಕ್ತಿಕ-ಕೌಟುಂಬಿಕ ಒತ್ತಡಗಳನ್ನೂ ರಾಷ್ಟ್ರನಿರ್ಮಾಣದ ಕೆಲಸವನ್ನೂ ಒಟ್ಟೊಟ್ಟಿಗೇ ನಿಭಾಯಿಸುತ್ತಾನೆ? – ಈ ಮೊದಲಾದ ಹಲವು ಪ್ರಶ್ನೆಗಳು ಈ ನಾಟಕದುದ್ದಕ್ಕೂ ಪ್ರತಿಧ್ವನಿಸುತ್ತಲೇ ಇರುತ್ತವೆ. ಇಂಥ ಐತಿಹಾಸಿಕ ಸಾಂದರ್ಭಿಕ ವಿಚಾರಗಳನ್ನು ಪರಿಶೀಲನೆ ಮಾಡುತ್ತಿದ್ದರೂ ಕೂಡ ಪ್ರಸ್ತುತ ನಾಟಕವು ವಾಸ್ತವವಾದಿ ಪಾತಳಿಯಲ್ಲಿ ಸಾಗುವುದಿಲ್ಲ ಎಂಬುದು ಗಮನಾರ್ಹ; ನಾಟಕಕಾರರು ಈ ಮಾರ್ಗವನ್ನು ಪ್ರಜ್ಞಾಪೂರ್ವಕ ಬಿಟ್ಟಿದ್ದಾರೆ. ಬದಲು, ತುಂಬ ಸೂಕ್ಷ ವಾಗಿ ಮತ್ತು ಕೌಶಲಪೂರ್ಣವಾಗಿ ಅವರು, ಹಲವು ಬಗೆಯ ದೇಶಿ ಕಥನ-ಕಾವ್ಯ-ನಾಟಕ ಮಾದರಿಗಳ ಜತೆಗೆ ತಮ್ಮ ನಾಟಕೀಯ ನಿರೂಪಣೆಯನ್ನು ಕಸಿ ಮಾಡಿದ್ದಾರೆ. ಈ ನಾಟಕದ ನಿರೂಪಣೆಯಲ್ಲಿ ನಾಟಕಕಾರರು ತುಂಬ ಎಚ್ಚರದಿಂದ ಆಯ್ದ ಜಾನಪದ ಗೀತೆಗಳನ್ನು ಬಳಸುತ್ತಾರೆ; ಸಾಂಪ್ರದಾಯಿಕ ಮತ್ತು ಆಧುನಿಕ ಕಾವ್ಯಭಾಗಗಳನ್ನು ಬಳಸುತ್ತಾರೆ; ಮತ್ತು ಇವೆಲ್ಲ ಕೂಡಿದ ವಾಗ್ವಿಲಾಸವೊಂದನ್ನು ಈ ನಾಟಕವು ಕಟ್ಟಿಕೊಂಡಿದೆ. ಇಂಥ ಭಾಷಾಭಿತ್ತಿಯಿರುವ ಕಾರಣದಿಂದಲೇ, ಈ ನಾಟಕವು ನಿರ್ದಿಷ್ಟ ದೇಶಕಾಲದ ಐತಿಹಾಸಿಕ ಘಟನೆ-ವ್ಯಕ್ತಿ-ಸ್ಥಳಗಳನ್ನು ಬಿಂಬಿಸುತ್ತಲೇ, ಅದನ್ನೊಂದು ಶ್ರೀಮಂತ ಪುರಾಣವಾಗಿ ಹೆಣೆಯುವುದರಲ್ಲೂ ಸಫಲವಾಗಿದೆ.
Reviews
There are no reviews yet.