Description
ಲೋಕೋತ್ತಮೆ: ಚನ್ನಕೇಶವ ಮತ್ತು ಲೇಖಕರಾದ ಡಾ. ವಿಶಾಲಾ ವಾರಣಾಶಿ ಅವರು ಭಾವಾನುವಾದ ಮಾಡಿದ, ಸುಮಾರು ಕ್ರಿ.ಪೂ 411ರಲ್ಲಿ ಗ್ರೀಕ್ ನಾಟಕಕಾರ ಅರಿಸ್ಟೋಫಿನಿಸ್‌ನಿಂದ ರಚಿತವಾದ ನಾಟಕವಿದು. ಸ್ಪಾರ್ಟಾ ಹಾಗೂ ಅಥೆನ್ಸ್ ನಗರಗಳ ನಡುವೆ ನಿಯಮಿತವಾಗಿ ನಡೆಯುತ್ತಿದ್ದ ಯುದ್ಧಗಳಿಂದ ಕಂಗೆಟ್ಟಿದ್ದ ಆ ಎರಡೂ ನಗರಗಳ ಹೆಣ್ಣು ಮಕ್ಕಳು ಲೈಸಿಸ್ಟ್ರಾಟ ಎಂಬ ಹೆಣ್ಣುಮಗಳ ನೇತೃತ್ವದಲ್ಲಿ ಒಂದು ಕ್ರಾಂತಿಕಾರಕ ನಿರ್ಧಾರಕ್ಕೆ ಬರುತ್ತಾರೆ. ಯುದ್ಧ ನಿಲ್ಲಿಸಿ ಎರಡೂ ನಗರಗಳು ಶಾಂತಿಯ ಒಪ್ಪಂದಕ್ಕೆ ಬರುವವರೆಗೂ ತಾವುಗಳು ಯಾರೂ ತಮ್ಮ ತಮ್ಮ ಗಂಡಂದಿರೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ತೀರ್ಮಾನಿಸಿ ಊರಿನ ಹಣಕಾಸಿನ ಸೌಧವನ್ನು ವಶಪಡಿಸಿಕೊಂಡು ಎಲ್ಲ ಹೆಂಗಸರೂ ಅಲ್ಲಿ ಸೇರಿಕೊಂಡು ಪ್ರತಿಭಟಿಸತೊಡಗುತ್ತಾರೆ. ಹೆಂಗಸರ ಈ ವಿಚಿತ್ರ ಪ್ರತಿಭಟನೆಗೆ ಕಡೆಗೆ ವಿಧಿಯಿಲ್ಲದೆ ಗಂಡಸರೆಲ್ಲ ಬಗ್ಗಿ ಶಾಂತಿ ಒಪ್ಪಂದಕ್ಕೆ ಬಂದು ಯುದ್ಧದಿಂದ ವಿಮುಖರಾಗುತ್ತಾರೆ. ಇದೂ ಸಹ ಮೇಲಿನ ನಾಟಕದಂತೆ ರೂಪಕದ ಮಾದರಿಯಲ್ಲಿದ್ದು ನಟರ ತಂಡ, ಸಂಗೀತದ ಮೇಳ ಇವನ್ನೆಲ್ಲ ಯಶಸ್ವಿಯಾಗಿ ಬಳಸಿಕೊಂಡು ಮಾಡಬಹುದಾದ ನಾಟಕವಾಗಿದೆ. ಅಲ್ಲದೆ ನೀನಾಸಮ್ ತಿರುಗಾಟಕ್ಕೆ ಚನ್ನಕೇಶವ ಅವರು ಯಶಸ್ವಿಯಾಗಿ ಈ ನಾಟಕವನ್ನು ನಿರ್ದೇಶನ ಮಾಡಿದ್ದರು ಕೂಡ.
ಕಾಲಯಾತ್ರೆ: ರವೀಂದ್ರನಾಥ ಟ್ಯಾಗೋರರ ಅಷ್ಟೇನೂ ಪ್ರಸಿದ್ಧವಲ್ಲದ ಸಣ್ಣ ರೂಪಕದಂತಹ ನಾಟಕ ಇದು. ಇದನ್ನು ನೇರ ಬಂಗಾಳಿಯಿಂದ ಮೀರಾ ಚಕ್ರವರ್ತಿಯವರ ಸಹಾಯದಿಂದ ಕನ್ನಡಕ್ಕೆ ತಂದಿದ್ದಾರೆ ಚನ್ನಕೇಶವ ಅವರು. ಅದೆಷ್ಟು ಚೆನ್ನಾಗಿ ಇದನ್ನು ಕನ್ನಡಕ್ಕೆ ತಂದಿದ್ದಾರೆ ಎಂದರೆ ಎಂದರೆ ಓದುತ್ತಿದ್ದರೆ ಖುಷಿಯಾಗುತ್ತದೆ. ಅನಾದಿಕಾಲದಿಂದಲೂ ಇರುವ ಮಹಾಕಾಲದ ರಥವು ಇಂದು ಯಾರು ಬಂದು ಎಷ್ಟೇ ಬೊಬ್ಬೆ ಹೊಡೆದರೂ ಒಂದಿಂಚೂ ಅಲುಗದೆ ನಿಂತುಬಿಟ್ಟಿದೆ! ಹಿಂದೆಲ್ಲ ರಾಜ ಮಹಾರಾಜರು ಬಂದು ಪೂಜೆ ಮಾಡಿ ಕೈ ಹಚ್ಚುತ್ತಿದ್ದಂತೆ ಚಲಿಸುತ್ತಿತ್ತು, ನಂತರ ರಾಜ ಪುರೋಹಿತರುಗಳು ಬಂದು ಕೈಮುಗಿದು ಕೈ ಹಚ್ಚಿದಾಗ ಚಲಿಸುತ್ತಿತ್ತು, ತದನಂತರ ಪಟ್ಟಣಶೆಟ್ಟಿಗಳು ಬಂದಾಗ ಚಲಿಸುತ್ತಿತ್ತು. ಆದರೆ ಇಂದು ಇವ್ಯಾರಿಗೂ ಅದು ಕಮಕ್‍ಕಿಮಕ್ಕೆನ್ನದೆ ತನ್ನ ಇಂದಿನ ಚಾಲಕರಾದ ಶೂದ್ರರ ದಾರಿ ಕಾಯುತ್ತ ಕುಳಿತಿದೆ ಈ ಮಹಾಕಾಲನ ರಥ! ಕುವೆಂಪುರವರ ಬಹಳ ಪ್ರಸಿದ್ಧ ನಾಟಕ ಶೂದ್ರತಪಸ್ವಿಯನ್ನು ನೆನಪಿಸುವಂತಿದೆ ಈ ನಾಟಕ. ಮತ್ತೊಮ್ಮೆ ಸಂಗೀತ, ಮೇಳ, ಹಾಗೂ ರಂಗಸಜ್ಜಿಕೆಯನ್ನು ಯಶಸ್ವಿಯಾಗಿ ರಂಗದ ಮೇಲೆ ಕಾಣಬಹುದಾದ ನಾಟಕವಿದು.
Reviews
There are no reviews yet.