Description
ಶಿವ ವಿಶ್ವನಾಥನ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕುರಿತಂತೆ ಆಳವಾದ ಪಾಂಡಿತ್ಯದಿಂದ ಮತ್ತು ಸಾಮಾಜಿಕ ಬದ್ಧತೆಯಿಂದ ಬರೆಯುವ ಲೇಖಕ. ಆಧುನಿಕ ವಿಜ್ಞಾನಕ್ಕೆ ಹಿನ್ನೆಲೆಯಾಗಿರುವ ತಾತ್ವಿಕತೆಯನ್ನೂ ಪಶ್ಚಿಮದಲ್ಲಿ ಆಧುನಿಕ ವಿಜ್ಞಾನವು ರೂಪುಗೊಂಡ ಸಾಮಾಜಿಕ ಸಂದರ್ಭವನ್ನೂ ನಿಖರವಾಗಿ ಗುರುತಿಸುವ ಶಿವ ವಿಶ್ವನಾಥನ್ ಪ್ರಸ್ತುತ ಕಾಲದಲ್ಲಿ ವಿಜ್ಞಾನದ ಅನುಸರಣೆಗೆ ಸಂಬಂಧಿಸಿದಂತೆ ಜಗತ್ತೂ ಮತ್ತು ಭಾರತವೂ ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಪ್ರಸ್ತಾಪಿಸುತ್ತಾರೆ. ಪ್ರಸ್ತುತ ಪುಸ್ತಕದಲ್ಲಿ ಅವರ ಮೂರು ಲೇಖನಗಳು ಅನುವಾದಿತವಾಗಿದ್ದು, ಅದರಲ್ಲಿ ವಿಜ್ಞಾನ-ಪ್ರಭುತ್ವ-ಸಮಾಜ-ಸಂಸ್ಕೃತಿಗಳ ಪರಸ್ಪರ ಸಂಬಂಧಗಳ ಶೋಧನೆಯಿದೆ. ಈ ಸಂಕಲನದ ಹಿನ್ನುಡಿಯಲ್ಲಿ ಡಿ.ಆರ್. ನಾಗರಾಜ ಅವರು ಗುರುತಿಸುವಂತೆ, ಈ ಬರಹಗಳು ಒಂದು ಕಡೆಗೆ ಭಾರತದಲ್ಲೂ ಜಾಗತಿಕ ವಾಗಿಯೂ ವ್ಯಾಪಕಗೊಳ್ಳುತ್ತಿರುವ ವಿಜ್ಞಾನ-ತಂತ್ರಜ್ಞಾನದ ಆಕ್ರಮಣಕ್ಕೆ ವಿರೋಧಿಯಾದ ಹೋರಾಟಕ್ಕೆ ಪೂರಕವೆಂಬಂತೆಯೂ ಮತ್ತು ಪರ್ಯಾಯ ವಿಜ್ಞಾನವೊಂದರ ಹುಡುಕಾಟಕ್ಕೆ ಪ್ರೇರಕವೆಂಬಂತೆಯೂ ಇವೆ. ಹಲವು ವರ್ಷಗಳ ಹಿಂದೆ, ಅಕ್ಷರ ಚಿಂತನಮಾಲೆಯಲ್ಲಿ ಪ್ರಕಟಗೊಂಡಿದ್ದ ಈ ಪುಸ್ತಕವು ಈಗ ಹೊಸತಾಗಿ ಮುದ್ರಣಗೊಳ್ಳುತ್ತಿದೆ.
ಈ ಪುಸ್ತಕದಲ್ಲಿರುವ ಒಟ್ಟು ಏಳು ಪ್ರಬಂಧಗಳಲ್ಲಿ ಮೂರು ವಿಜ್ಞಾನದ ‘ಸಾರ್ವತ್ರಿಕತೆ’ಯ ಸೋಗನ್ನು ಟೀಕಿಸುವಂಥವು. ಅರ್ಥಾತ್, ಈ ಬರಹಗಳು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳು ತಾವು ಎಲ್ಲ ಕಾಲ-ದೇಶಗಳಿಗೂ ಅನ್ವಯವಾಗುವಂಥವು ಎಂದು ನಿರ್ಮಿಸುವ ಭ್ರಮೆಯನ್ನು ಪ್ರಖರವಾಗಿ ಪ್ರಶ್ನಿಸುವಂಥವು. ಇನ್ನು ಎರಡನೆಯ ಗುಂಪಿನ ಪ್ರಬಂಧಗಳು ವಿಜ್ಞಾನದ ಸಾಮಾಜಿಕ ವಿಮರ್ಶೆಗಳು; ಪಶ್ಚಿಮ ಏಶಿಯಾದ ಜನಪರ ಚಳುವಳಿಗಳ ಹಿನ್ನೆಲೆಯಲ್ಲಿ ವಿಜ್ಞಾನದ ಬಗ್ಗೆ ಬೌದ್ಧಿಕವಾದ ಅಸ್ತಿತ್ವವಾದಿ ಪ್ರಶ್ನೆಗಳನ್ನು ಎತ್ತುವ ಬರಹಗಳು ಇವು. ಈ ಎರಡು ಮಾರ್ಗಗಳ ನಡುವೆ ವಿಶ್ವನಾಥನ್‌ರ ಬರಹಗಳು ಲೀಲಾಜಾಲವಾಗಿ ಅತ್ತಿಂದಿತ್ತ ಜಿಗಿದಾಡುತ್ತವೆ. ಉದಾಹರಣೆಗೆ, ‘ಪ್ರಭುತ್ವ-ಪ್ರಯೋಗಶಾಲೆಯ ದಸ್ತಾವೇಜುಗಳ ವಿಚಾರ’ ಎಂಬ ಅವರ ಗಹನವಾದ ಮತ್ತು ಚಿಂತನಶೀಲ ಲೇಖನವು ‘ಸಾರ್ವತ್ರಿಕತೆಯ ವಿಮರ್ಶೆ’ಯ ಮೊದಲ ಗುಂಪಿಗೆ ಸೇರುವಂಥದು. ಅಭಿವೃದ್ಧಿ ಬಯಕೆಯ ಪ್ರಭುತ್ವದ ಅಪಾಯಕಾರಿ ಮಾರ್ಗಗಳನ್ನು ವಿಶ್ಲೇಷಿಸುತ್ತ, ಆ ಲೇಖನದ ಕಡೆಯ ಭಾಗದಲ್ಲಿ ಅವರು, ಚಿಪ್ಕೊ ಮತ್ತು ರೈತಹೋರಾಟಗಳ ಅನುಭವಕ್ಕೆ ಅದನ್ನು ಮುಖಾಮುಖಿಯಾಗಿಸುತ್ತಾರೆ.
– ಡಿ.ಆರ್. ನಾಗರಾಜ್
ಹಿನ್ನುಡಿಯಿಂದ
Reviews
There are no reviews yet.