Description
ಪಾಕಿಸ್ತಾನದಲ್ಲಿ ಹುಟ್ಟಿ, ಇಂಗ್ಲೆಂಡ್‌ನಲ್ಲಿ ಶಿಕ್ಷಣ ಮುಗಿಸಿ ಪ್ರಕೃತ ಅಲ್ಲೇ ನೆಲೆಸಿರುವ ಜಿಯಾವುದ್ದೀನ್ ಸರ್ದಾರ್ ದೇಶ ಸುತ್ತಿ ಕೋಶ ಓದಿ ಬಹುಶ್ರುತರಾದವರು. ತೀಕ್ಷ್ಣ ವೈಚಾರಿಕತೆಯ ಜೊತೆಗೆ ಕಲಾವಿದನ ಸೂಕ್ಷ್ಮಜ್ಞತೆಯನ್ನು ಮೈಗೂಡಿಸಿಕೊಂಡ ಚಿಂತಕರಾಗಿರುವ ಜಿಯಾ ಓರ್ವ ಶ್ರದ್ಧಾವಂತ ಮುಸ್ಲಿಮನೂ ಹೌದು. ಧಾರ್ಮಿಕ ಶ್ರದ್ಧೆ ಮತ್ತು ಧಾರ್ಮಿಕ ಮೂಲಭೂತವಾದಗಳ ನಡುವೆ ವ್ಯತ್ಯಾಸವೇ ಇಲ್ಲವೆಂಬಂತೆ ಮುಸ್ಲಿಮ್ ಸಮುದಾತವನ್ನು ಸಾರಾಸಗಟಾಗಿ ಮೂಲಭೂತವಾದಿ ಎಂದು ಈಗ ಹಳಿಯಲಾಗುತ್ತದೆ. ಹೀಗಿರುತ್ತ ಜಿಯಾ, ತನ್ನ ಕೃತಿಯ ಶೀರ್ಷಿಕೆಯಲ್ಲೇ ತಾನು ಓರ್ವ ಸಂದೇಹಿ ಮುಸ್ಲಿಮ್ ಎಮ್ದು ಹೇಳಿಕೊಂಡಿರುವುದು ಕುತೂಹಲ ಹುಟ್ಟಿಸುತ್ತದೆ.
ಅಮೇರಿಕಾ, ಇಂಗ್ಲೆಂದ್, ಟರ್ಕಿ, ಸೌದಿ ಅರೇಬಿಯಾ, ಈಜಿಪ್ಟ್, ಇರಾಕ್, ಸಿರಿಯ, ಜೋರ್ಡಾನ್, ಪಾಕಿಸ್ತಾನ, ಚೀನಾ, ಮಲೇಶಿಯಾ ಮೊದಲಾದ ದೇಶಗಳಲ್ಲಿ ಸುತ್ತಾಡಿ, ಜಾಗತಿಕ ಮುಸ್ಲಿಮ್ ಸಮುದಾಯದ ವೈವಿಧ್ಯಮಯ ಬದುಕನ್ನೂ ಇಸ್ಲಾಂನ ಬಹುವಚನಿ ಸ್ವರೂಪವನ್ನೂ ಜಿಯಾ ಈ ಕೃತಿಯಲ್ಲಿ ಮನೋಜ್ಞವಾಗಿ ಚಿತ್ರಿಸುತ್ತಾರೆ. ಆ ಧರ್ಮದ ಪವಿತ್ರ ಗ್ರಂಥ ಕುರಾನ್ ಶರೀಫ್‌ಗೆ ಇರುವುದು ಒಂದೇ ವ್ಯಾಖ್ಯೆ ಮತ್ತು ಅದು ಪ್ರಶ್ನಾತೀತ- ಎಲ್ಲ ಕಾಲಗಳಲ್ಲಿಯೂ, ಎಲ್ಲ ದೇಶಗಳಲ್ಲಿಯೂ- ಎಂಬ ಮೂಲಭೂತವಾದಿ ಹಠ ಈಗ ಎಲ್ಲೆಡೆ ಹಬ್ಬಿದೆ. ಹಿಂಸ್ರವೂ ಅಪ್ರಜಾಸತ್ತಾತ್ಮಕವೂ ಆಗಿರುವ ಈ ಹಠ ಒಮ್ದು ಆಧುನಿಕ ವಿದ್ಯಮಾನವಾಗಿದ್ದು ಇಸ್ಲಾಂನ ಬಹುಮುಖಿ ಜ್ಞಾನಪರಂಪರೆಗೆ ಅದು ವಿರುದ್ಧವಾಗಿದೆ ಎಂದು ಲೇಖಕರು ಇಲ್ಲಿ ವಿದ್ವತ್ಪೂರ್ಣವಾಗಿ ಪ್ರತಿಪಾದಿಸುತ್ತಾರೆ.
ಮೂಲಭೂತವಾದ ಈಗ ಎಲ್ಲ ಮತಧರ್ಮಗಳಲ್ಲಿಯೂ ತಲೆದೋರಿರುವುದರಿಂದ, ತನ್ನ ಧರ್ಮದ ಬಗ್ಗೆ ಜಿಯಾ ಆತ್ಮವಿಮರ್ಶೆಯ ವಿಷಾದದಲ್ಲಿ ಹೇಳುವ ಮಾತುಗಳು, ಎಲ್ಲ ಧಾರ್ಮಿಕ ಸಮುದಾಯಗಳಿಗೂ ಅನ್ವಯಿಸುವಂತಿವೆ.
-ಜಿ. ರಾಜಶೇಖರ್
Reviews
There are no reviews yet.