Description
…ಅಶೀಶ್ ನಂದಿಯವರದು ಆರಾಮ ಕುರ್ಚಿಯ ಚಿಂತನೆ ಅಲ್ಲ; ಬದಲು, ಸಿದ್ಧ-ಸಿದ್ಧಾಂತಗಳೆಂಬ ಆರಾಮ ಕುರ್ಚಿಯಲ್ಲಿ ಒರಗಿದವರನ್ನು ಹೌಹಾರಿಸಿ ಬೀಳಿಸುವ ಚಿಂತನೆ. ಉದಾಹರಣೆಗೆ, ನಂದಿ ಅವರ ಪ್ರಕಾರ, ಸೆಕ್ಯುಲರಿಸಮ್ ಮತ್ತು ಕೋಮುವಾದಗಳು ಇವತ್ತು ಜನಪ್ರಿಯ ನೆಲೆಯಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಶತ್ರುಗಳಂತೆ ಬಿಂಬಿತವಾಗುತ್ತಿದ್ದರೂ ಕೂಡ ನಿಜವಾಗಿ ಅವು ವಿರೋಧಿ ಮೂಲದ ಪರಿಕಲ್ಪನೆಗಳಲ್ಲ, ಮೂಲತಃ ಆಧುನಿಕತೆಯ ಅವ್ಯಕ್ತ ಸಂತಾನಗಳು; ಒಂದೇ ಸೊಂಟವನ್ನು ಹಂಚಿಕೊಂಡಿರುವ ಸಯಾಮಿ ಅವಳಿಗಳು. ಆದ್ದರಿಂದಲೇ ಒಂದೆಡೆ ಸೆಕ್ಯುಲರಿಸಮ್ಮಿನ ಉಗ್ರ ಪ್ರತಿಪಾದನೆ ಹೆಚ್ಚುತ್ತಿದ್ದಂತೆ, ಅದಕ್ಕೆ ಪ್ರತಿಕ್ರಿಯಾತ್ಮಕವಾಗಿ ಇನ್ನೊಂದೆಡೆ ಅಷ್ಟೇ ಪ್ರಬಲವಾದ ಕೋಮುವಾದವೂ ಬಲಗೊಳ್ಳುತ್ತ ಹೋಗುತ್ತದೆ – ಎಂಬ ಸೂಚನೆಯನ್ನು ನಂದಿಯವರ ಬರಹಗಳು ಮುಂದಿಡುತ್ತವೆ… ಹಾಗಂತ, ಇಂಥ ಒಂದು ಪ್ರಸ್ತಾಪವನ್ನು ನಂದಿಯವರು ರೋಚಕವಾದ ಒಂದು ರೂಪಕವಾಗಿ ಮಾತ್ರ ಮಂಡಿಸುವುದಿಲ್ಲ ಎಂಬುದನ್ನೂ ನಾವು ಅಗತ್ಯ ಗಮನಿಸಬೇಕು. ಬದಲು, ಇಂಥ ವೈರುದ್ಧಗಳು ಹೇಗೆ ಇವತ್ತಿನ ಕಾಲದ ನಮ್ಮ ವಿದ್ಯಮಾನಗಳಲ್ಲಿ ಮೇಲುಗಣ್ಣಿಗೆ ಕಾಣದ ಹಾಗೆ ಕರಗಿಹೋಗಿವೆ ಎಂಬುದನ್ನೂ ಸಾವಧಾನವಾಗಿ, ವಾಸ್ತವಾಂಶಗಳ ಅಧ್ಯಯನಗಳ ಮೂಲಕ ಅವರು ಬಿಚ್ಚಿಡುತ್ತ ಹೋಗುತ್ತಾರೆ… ಹೀಗೆ, ನಾವು ಯಾವುದನ್ನು ಸ್ವತಃಸಿದ್ಧ ಸತ್ಯ ಎಂದು ನಂಬಿರುತ್ತೇವೋ ಅದನ್ನು ಬೇರೆ ದಿಕ್ಕಿನಿಂದ ಪರಾಮರ್ಶಿಸಿ, ಅದು ಹಲವೊಮ್ಮೆ ನಮ್ಮ ರೂಢಿಗತ ನಂಬಿಕೆಗಳ ಉತ್ಪನ್ನವಾಗಿರಬಹುದು, ಸಿದ್ಧಮಾದರಿಯ ಚಿಂತನೆಗಳ ಪರಿಣಾಮ ಮಾತ್ರ ಆಗಿರಬಹುದು ಅಥವಾ ಕೆಲವೊಮ್ಮೆ ಕೇವಲ ಬೌದ್ಧಿಕ ಸೋಮಾರಿತನದ ಫಲವಷ್ಟೇ ಆಗಿರಬಹುದು – ಎಂದು ಯೋಚಿಸಲು ಹಚ್ಚುವುದೇ ಅಶೀಶ್ ನಂದಿಯವರ ಕ್ರಿಯಾಶೀಲತೆಯ ಮೂಲ ಆಶಯ…
Reviews
There are no reviews yet.