
ಲಲಿತ ರಗಳೆ
ರಾಧಾಕೃಷ್ಣ ಕಲ್ಚಾರ್
ಸ್ನಾನದಿಂದ ತೊಡಗಿ ದೆವ್ವ-ಪಿಶಾಚಿಗಳವರೆಗೆ, ದೋಸೆ-ಚಟ್ನಿಯಿಂದ ಆರಂಭಿಸಿ ಗಿಡಮರಗಳ ಕಷ್ಟಸುಖದವರೆಗೆ ಈ ಲೋಕದಲ್ಲಿ ನಮಗೆಲ್ಲ ಕಾಣಿಸುವ, ಮತ್ತು ಕಾಣಿಸದೆ ಇರುವ, ಹತ್ತಾರು ಸಂಗತಿಗಳನ್ನು ಕುರಿತು ತಾಳಮದ್ದಲೆಯಲ್ಲಿ ಹದಗೊಂಡ ಮನಸ್ಸೊಂದು ನಡೆಸಿದ ಧ್ಯಾನಶೀಲ ಆಲೋಚನೆಗಳ ಗುಚ್ಛವೊಂದು ಈ ಪುಸ್ತಕದೊಳಗೆ ಕಟ್ಟಿಕೊಂಡಿದೆ. ಲಲಿತ ಪ್ರಬಂಧಗಳ ಲಘುತ್ವ ಮತ್ತು ದಾರ್ಶನಿಕ ನೋಟಗಳ ಗುರುತ್ವವೂ ಲಹರಿಯ ಸ್ವಚ್ಛಂದತೆಯೂ ವಿಚಾರದ ನಿಖರತೆಯೂ ಅಲ್ಲಲ್ಲಿ ಮುಖಾಮುಖಿಯಾಗಿ ನಮ್ಮನ್ನು ಬೆರಗುಗೊಳಿಸುವ ಹಲವು ಕ್ಷಣಗಳು ಈ ಪ್ರಬಂಧಗಳಲ್ಲಿ ನಮಗೆ ಎದುರಾಗಬಲ್ಲವು. ಮತ್ತು ನಮ್ಮದೇ ಮನೋಲಹರಿಯಲ್ಲಿ ಈ ಆಲೋಚನೆಗಳನ್ನು ಬೆಳೆಸಿಕೊಂಡು ಮರುರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ಈ ಬರಹಗಳು ನಮಗೆ ನೀಡುವಂತಿವೆ.
ಬೆಲೆ ರೂ 210/-

ಹುಡುಗನ ಹುಟ್ಟು
ಅಕ್ಷರ ಕೆ.ವಿ.
ಹುಟ್ಟಿನ ಹುಟ್ಟು ಮತ್ತು ಕಾವ್ಯದ ಗುಟ್ಟು – ಇದು ಪ್ರಾಜ್ಞ ಮನದ ಕೆ ವಿ ಅಕ್ಷರ ಅವರು `ಕುಮಾರಸಂಭವ’ದ ಅನುವಾದಕ್ಕೆ ಕೊಟ್ಟ ಒಗಟಿನಂಥ ಶೀರ್ಷಿಕೆ. ಇಂದಿಗೂ ಚಾಲ್ತಿಯಲ್ಲಿರುವ `ವಾಗರ್ಥ’ ಎಂಬ ಅಪೂರ್ವ ವಿಚಾರ ಮೊದಲಿಗೆ ಕಾಣಿಸಿಕೊಂಡಿದ್ದು ಕಾಳಿದಾಸನ ರಘುವಂಶ ಮಹಾಕಾವ್ಯದ ಆದಿಮಂಗಲ ಪದ್ಯದಲ್ಲಿ. ರಾಜತ್ವ ಚಿಂತನೆಯ ವಸ್ತುವಿಗೆ ಅಲ್ಲಿ ಹೆಚ್ಚಿನ ಇಂಬು ದೊರೆತಿದ್ದರಿಂದಲೊ ಏನೊ, ತನ್ನದೇ ಕಾವ್ಯತತ್ತ್ವ ಸಿದ್ಧಿಯ ಪೂರ್ಣ ತೃಪ್ತಿ ಅಲ್ಲಿ ಆತನಿಗೆ ಸಿಕ್ಕಿಲ್ಲದಿರಬಹುದು. ವಸ್ತು ಮತ್ತು ಅಭಿವ್ಯಕ್ತಿಯ ಕಾವ್ಯ ದಾಂಪತ್ಯದ ಅನ್ಯೋನ್ಯ ಮಿಲನ ಅಥವಾ ಮೇಳ ಸಾಧಿತವಾದಾಗಲೇ ಕಾಳಿದಾಸನಂಥ ಕವಿಯ ಮೇರು ಮನಕ್ಕೆ ಸಾರ್ಥಕತೆಯ ತಣಿವು.
ಮಾತು – ವಾಕ್ ಎಂಬುದಕ್ಕೆ ವಸ್ತು ಎಂಬ ಅರ್ಥವೂ ಇದೆ. ವಸ್ತು ಪ್ರಚೋದನೆ ಇಲ್ಲದೆ ಮಾತಿನ ಪ್ರಪಂಚ ಇಲ್ಲ ತಾನೆ. ವಾಗ್-ಅರ್ಥ ಪ್ರತಿನಿಧಿಗಳಾದ ಆದಿಮ ದಂಪತಿಗಳ ಏಕಾಕಾರ ಪ್ರತಿಮೆಯೇ ಇಲ್ಲಿ ಕಾವ್ಯದ ನಾಯಕ ಮತ್ತು ನಾಯಕಿ. ಎಂಟೇ ಸರ್ಗದ ಪುಟ್ಟ ಮಹಾಕಾವ್ಯ `ಕುಮಾರಸಂಭವ’ದಿಂದ ಕವಿಯ ಮನ ತಣಿದ ಕ್ಷಣ ಕಾವ್ಯ ತಾನಾಗಿ ನಿಲುಗಡೆ ಪಡೆದಿದ್ದಿರಬೇಕು. ಈ ಘನ ಕೃತಿಯ ಆಸ್ವಾದಕ್ಕೆ ಅನುಕೂಲವಾದ ಇಂದಿನ ಕನ್ನಡದ ಚೆಲುವಿನ ನಡೆ, ಮಾತ್ರಾ ಛಂದದ ಬಂಧಗಳಲ್ಲಿ ರೂಪ ತಾಳಿದ ಮಹತ್ವದ ಅನುವಾದ ಇದು.
– ಶ್ರೀರಾಮ ಭಟ್ಟ
ಬೆಲೆ ರೂ 240/-

ಶಕುಂತಲೆಯ ಗುರುತು
ಅಕ್ಷರ ಕೆ.ವಿ.
‘ಶಕುಂತಲೆಯ ಗುರುತು’ ಕಾಳಿದಾಸನ `ಅಭಿಜ್ಞಾನಶಾಕುಂತಲ’ ನಾಟಕದ ಹೊಸ ಅವತರಣ. ಆಧುನಿಕ ಕನ್ನಡದ ಸರಿಸುಮಾರು ನೂರಿಪ್ಪತ್ತೈದು ವರ್ಷಗಳಲ್ಲಿ ಕಾಳಿದಾಸನ ಈ ಸುವಿಖ್ಯಾತ ಕೃತಿಗೆ ಇಪ್ಪತ್ತೈದಕ್ಕೂ ಹೆಚ್ಚು ಅನುವಾದಗಳು ಸಂದಿವೆ. ಕನ್ನಡದ ಪುರಾತನರೂ ಅಲ್ಲಿ ಇಲ್ಲಿ ಮುಟ್ಟಿ ತಟ್ಟಿ ನೋಡಿದ್ದೂ ಇದೆ. ಪಂಪನೇ ತನ್ನ ಎರಡೂ ಕಾವ್ಯಗಳಲ್ಲಿ ಶಾಕುಂತಲದ ಸರ್ವಾಂಗ ಸೌಷ್ಠವದ ಕೆಲವು ಪದ್ಯಗಳನ್ನು ಅನುವದಿಸಿ ಅಳವಡಿಸಿದ್ದಿದೆ. ಈಗ ಶ್ರೀ ಕೆ ವಿ ಅಕ್ಷರ ಮತ್ತೊಮ್ಮೆ ಕನ್ನಡಕ್ಕೆ ಕರೆತಂದಿದ್ದಾರೆ. ಇಂದಿನ ಕನ್ನಡದ ನುಡಿಗಟ್ಟು, ಪ್ರಾಸಗಳ ಲಯ ಮತ್ತು ಮಾತ್ರಾಛಂದಸ್ಸಿನ ಪದ್ಯಗಳ ಆವರಣದಲ್ಲಿ ಈ ಅನುವಾದ ಇಂದಿಗೆ ಆಪ್ತವಾಗಿದೆ. ಕಾಳಿದಾಸನ ನಾಟಕ ನಿರ್ಮಾಣ ಕೌಶಲದ ಪರಿಣತ ಪ್ರಜ್ಞೆಯ ತಿಳಿವಳಿಕೆಯ ಹಿನ್ನೆಲೆ ಈ ಅನುವಾದಕ್ಕೆ ಒದಗಿದೆ. ಮುಖ್ಯವಾಗಿ ಧ್ವನಿತತ್ತ್ವದ ಪ್ರಸ್ಥಾನಕಾರ ಆನಂದವರ್ಧನನ `ರಸಪರ ತಂತ್ರ’ದ ಪರಿಕಲ್ಪನೆಯಿಂದ ಈ ಅನುವಾದ ಮತ್ತು ರಂಗಪ್ರಯೋಗ ಪರಿಪುಷ್ಟವಾಗಿದೆ. ಈ ರಸಾಭಿಜ್ಞ ಪರಿಕಲ್ಪನೆಗೆ ಕಾಲಿದಾಸನ ಕೃತಿಯೇ ನಿದರ್ಶನವೆಂಬುದು ಸ್ವಯಂ ಆನಂದವರ್ಧನನದೇ ಮಾತು. ಇಲ್ಲಿಯ ತನಕ ಈ ಮಾತು ಅಷ್ಟಾಗಿ ಮುನ್ನೆಲೆಗೆ ಬಂದಿರಲಿಲ್ಲ. ಇದನ್ನು ಪ್ರತಿಬಿಂಬಿಸಿದ ಸವಿಸ್ತರ ಪ್ರಸ್ತಾವನೆಯನ್ನು, ಈ ಅನುವಾದದ ಓದಿಗೂ ನಾಟಕವನ್ನು ನೋಡುವುದಕ್ಕೂ ಮೊದಲು ಅವಲೋಕಿಸಿದರೆ ಆಸಕ್ತರಿಗೆ ಹೆಚ್ಚಿನ ಸಹಾಯವಾದೀತು. ನೀನಾಸಂ ವಿದ್ಯಾರ್ಥಿಗಳು ಪ್ರಯೋಗಿಸಿದ ನವನವೀನ ಎನ್ನಬಹುದಾದ ಈ ಕೃತಿಯ ರಂಗಪ್ರಯೋಗಕ್ಕೆ ಸಾಕ್ಷಿಯಾಗುವ ಅವಕಾಶ ನನಗೆ ಇತ್ತೀಚೆಗೆ ಒದಗಿತ್ತು. `ಬಲ್ಲವರ ಆಪರಿತೋಷವೆ ಪ್ರಯೋಗವಿಜ್ಞಾನ’ – ಇದು ಕಾಳಿದಾಸನದೇ ಮಾತು.
– ಶ್ರೀರಾಮ ಭಟ್ಟ
ಬೆಲೆ ರೂ 200/-

ನಾಟ್ಯದರ್ಪಣ
ಪ್ರೊ. ಎಂ.ಎ. ಹೆಗಡೆ ಮತ್ತು ವಿದ್ವಾನ್ ವಿಜಯಸಿಂಹ
೧೨ನೆಯ ಶತಮಾನದ ಗುಜರಾತ್ ಪ್ರಾಂತ್ಯದಲ್ಲಿ ಬಾಳಿಬದುಕಿದ ರಾಮಚಂದ್ರ ಮತ್ತು ಗುಣಚಂದ್ರ ಎಂಬ ಜೈನ ಲೇಖಕರು ರಚಿಸಿದ ನಾಟಕ ಮೀಮಾಂಸೆ ಕುರಿತ ಗ್ರಂಥ ‘ನಾಟ್ಯದರ್ಪಣ’. ನಾಲ್ಕು ವಿವೇಕ – ಅಥವಾ ಅಧ್ಯಾಯ – ಗಳಲ್ಲಿ ವಿಭಜಿತವಾದ ಈ ಕೃತಿಯು ಸೂತ್ರ/ಕಾರಿಕೆಗಳ ರೂಪದಲ್ಲಿದೆ. ಭಾರತದ ರಂಗಸಂಪ್ರದಾಯಗಳ ಆದಿಮಗ್ರಂಥವಾಗಿರುವ ಭರತಮುನಿಯ ‘ನಾಟ್ಯಶಾಸ್ತ್ರ’ವನ್ನೇ ಅನುಸರಿಸಿ ಸಾಗುವ ಈ ಕೃತಿಯು ತನಗಿಂತ ತುಸು ಮೊದಲು ರಚಿತವಾದ ಇನ್ನೊಂದು ಪ್ರಸಿದ್ಧ ಮೀಮಾಂಸಾ ಕೃತಿ ಧನಂಜಯನ ‘ದಶರೂಪಕ’ವನ್ನೂ ಹೋಲುತ್ತದೆ. ಮಾತ್ರವಲ್ಲ, ಕೆಲವು ವಿದ್ವಾಂಸರ ಪ್ರಕಾರ, ಅದು ‘ದಶರೂಪಕ’ವನ್ನು ಮೀರಿಸಬೇಕೆಂಬ ಪೈಪೋಟಿಯಲ್ಲಿ ರಚಿತವಾಗಿರುವಂತೆಯೂ ತೋರುತ್ತದೆ. ಮುಖ್ಯವಾಗಿ ರಸಸ್ವರೂಪವನ್ನು ವಿವರಿಸುವಲ್ಲಿ ಈ ಕೃತಿಯು ಹಿಂದಿನ ಗ್ರಂಥಗಳಿಗಿಂತ ತುಸು ಭಿನ್ನ ನಿಲುವನ್ನು ತಾಳುತ್ತದೆಯೆಂದೂ ಅಧ್ಯಯನಕಾರರು ಗುರುತಿಸಿದ್ದಾರೆ. ಇದುವರೆಗೂ ಕನ್ನಡಕ್ಕೆ ಅನುವಾದಗೊಂಡಿರದ ಈ ಕೃತಿಯು ಕನ್ನಡ ನಾಡಿನ ಸಾಹಿತ್ಯ-ರಂಗಭೂಮಿಗಳ ವಿದ್ವಾಂಸರಿಗೂ ವಿದ್ಯಾರ್ಥಿಗಳಿಗೂ ಉಪಯುಕ್ತವಾದೀತೆಂದು ಈ ಪ್ರಕಟಣೆ ನಂಬುತ್ತದೆ.
ಬೆಲೆ ರೂ 355/-

ಸೊಬಗಿನ ಹೊನಲು
ಎಚ್.ಎಸ್. ಶಿವಪ್ರಕಾಶ
ಕನ್ನಡದ ಸುಪ್ರಸಿದ್ಧ ಲೇಖಕ ಎಚ್. ಎಸ್. ಶಿವಪ್ರಕಾಶ್ ಅವರ ಕಾವ್ಯದ ಆಸಕ್ತಿ ಬಹುಮುಖಿಯಾದದ್ದು. ಪ್ರಮಾಣ ಮತ್ತು ಗಾತ್ರಗಳೆರಡರಲ್ಲೂ ಅವರ ಬರಹಗಳಲ್ಲಿ ಕಾವ್ಯದ ಪಾಲೇ ಹೆಚ್ಚು. ಮಾತ್ರವೇ ಅಲ್ಲ, ಅವರು ಈಗಾಗಲೇ ಹಲವು ಭಾರತೀಯ ಮತ್ತು ವಿದೇಶಿ ಭಾಷೆಗಳಿಂದ ಕಾವ್ಯವನ್ನು ಕನ್ನಡೀಕರಿಸಿದ್ದಾರೆ; ಆಧುನಿಕಪೂರ್ವದ ಹಲವು ಮಹತ್ವದ ಕವಿಗಳ ಜತೆಗೆ ಅನುವಾದವೂ ಸೇರಿದಂತೆ ಬೇರೆಬೇರೆ ನೆಲೆಗಳ ಅನುಸಂದಾನ ನಡೆಸಿದ್ದಾರೆ. ಅವರ ಇಂಥ ಎಲ್ಲ ಪೂರ್ವಕಾರ್ಯಗಳ ಒಂದು ಮುಂದುವರಿಕೆಯೋ ಎಂಬಂತೆ ಆದಿಶಂಕರರದೆಂದು ಹೇಳಲಾಗುವ `ಸೌಂದರ್ಯಲಹರಿ’ ಪಠ್ಯವು ಅವರಿಂದ ಕನ್ನಡಕ್ಕೆ ಬರುತ್ತಿದೆ. ‘ಸೌಂದರ್ಯಲಹರಿ’ ಪಠ್ಯಕ್ಕೆ ಹಲವು ಆಯಾಮದ ಓದುಗಳು ಸಾಧ್ಯವಿದೆ – ಅದನ್ನು ಕಾವ್ಯಾಸ್ವಾದನೆಗಾಗಿ ಓದುವುದರಿಂದ ಆರಂಭಿಸಿ ತಾಂತ್ರಿಕ ಸಾಧನೆಯ ಮಾರ್ಗವಾಗಿ ಬಳಸುವವರೆಗೆ ಆ ನೆಲೆಗಳು ವಿಸ್ತರಿಸಿಕೊಂಡಿವೆ. ಶಿವಪ್ರಕಾಶರ ಪ್ರಸ್ತುತ ಅನುವಾದವು ಆ ಪಠ್ಯದ ಇಂಥ ನೆಲೆಗಳೆಲ್ಲವನ್ನೂ ಒಟ್ಟಯಿಸುವುದಕ್ಕೆ ಮಾಡಿರುವ ಒಂದು ಪ್ರಯೋಗ ಎಂಬಂತಿದೆ.
ಬೆಲೆ ರೂ 200/-

ಕಮಲೆ ಮಲಗಿದ್ದಾಳೆ
ಸಮುದ್ಯತಾ ವೆಂಕಟರಾಮು
ಸಮುದ್ಯತಾ ಅವರ ಸಂಪೂರ್ಣ ಗಮನವು ಹೆಣ್ಣು ಜೀವನದ ಗೂಢತೆ, ನೋಡಲು ಸ್ವತಂತ್ರ ಬದುಕು ಎನಿಸಿದರೂ ಅಗೋಚರ ಶಕ್ತಿಯೊಂದರಿಂದ ನಿಯಂತ್ರಿಸಲ್ಪಡುವ ಸ್ತ್ರೀ ಬದುಕಿನ ಅನೂಹ್ಯ ಏರಿಳಿತಗಳು, ಸದ್ದಿಲ್ಲದೆ ಅವೆರಡನ್ನೂ ಉಣ್ಣುವ ಮೇಲ್ಮಧ್ಯಮ ವರ್ಗದ ಗೃಹಿಣಿಯೊಬ್ಬಳ ಒಳ ತಾಕಲಾಟಗಳನ್ನು ಹಿಡಿದಿಡುವುದರಲ್ಲಿ ಮಗ್ನಗೊಂಡಿದೆ. ಒಂದಿಲ್ಲ ಇನ್ನೊಂದು ತೆರದಲ್ಲಿ ಅವರ ಕಾವ್ಯದ ಸ್ಥಾಯೀಭಾವವು ಈ ಗೂಢವನ್ನು ಒಡೆಯಬಯಸುವ ಸ್ತ್ರೀ ಮನವೊಂದರ ಸದ್ದಿಲ್ಲದ ಹೋರಾಟವೇ ಆಗಿದೆ…
ಲಲಿತಾ ಸಿದ್ಧಬಸವಯ್ಯ
ಕೊಂಕಿಲ್ಲದ, ದ್ವೇಷವಿಲ್ಲದ, ಪ್ರೀತಿಯ, ಸ್ನೇಹದ ಸಹಜ ಸ್ಪಂದನೆಯ ಹುಡುಕಾಟ ಇಲ್ಲಿರುವ ಬಹುತೇಕ ಕವನಗಳ ವಸ್ತು…
ದೇವೇಂದ್ರ ಬೆಳೆಯೂರು
ಬೆಲೆ ರೂ 200/-

ಊರೆಂಬ ಉದರ
ಪ್ರಮೀಳಾ ಸ್ವಾಮಿ
ಜೀವನದ ಮುಖ್ಯ ಕರ್ತವ್ಯ ಮುಗಿದ ಮೇಲೆ ಹಿರಿಯ ಜೀವವೊಂದು ಜಗಲಿಯಲ್ಲಿ ಮನೆ ಮಂದಿಯೊಂದಿಗೆ, ತನ್ನ ಸಂದಕಾಲದ ಮಾಯೆಯನ್ನು ಮೆಲುಕುವಂತೆ ಸುರುವಾಗುವ ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನ್ನಿಸದಂತೆ, ಮುಂದಣ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ ಪ್ರಸ್ತಾಪವಾಗಿದೆ. ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪ್ರಾಪ್ತವಾಗಿದೆ. ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯೇ ಅಲ್ಲ ಆಗಿಸಿದೆ.
– ವೈದೇಹಿ
ಒಂದು ಊರಿನಲ್ಲಿ ಬದುಕಿ ಬಾಳಿದ ಲೇಖಕಿಯ ಸ್ಮೃತಿಚಿತ್ರ, ಹಾಗೆಯೇ ಒಂದು ಸಮುದಾಯದ ಆಹಾರ ಪದ್ಧತಿಯನ್ನು ಕುರಿತ ಪಾಕಶಾಸ್ತ್ರದ ಕೈಪಿಡಿ. ಹೀಗೆ, ಲೇಖಕಿಯು ತನ್ನ ಬಾಲ್ಯದ ಸ್ಮೃತಿಗಳನ್ನು ಹಾಗೂ ತನ್ನ ಸಮುದಾಯದ ವಿಶಿಷ್ಟ ಖಾದ್ಯಗಳ ತಯಾರಿಕೆಯ ವಿವರಗಳನ್ನು ಒಂದು ಹದದಲ್ಲಿ ಬೆರೆಸಿ ಈ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
– ಸಿ.ಎನ್. ರಾಮಚಂದ್ರನ್
ಬೆಲೆ ರೂ 320/-




































































































