

ಮದರ್ ಕರೇಜ್ ಮತ್ತು ಅವಳ ಮಕ್ಕಳು
ಬರ್ಟೋಲ್ಟ್ ಬ್ರೆಖ್ಟ್
ಕನ್ನಡಕ್ಕೆ: ಅಕ್ಷರ ಕೆ.ವಿ.
ಪರಿಚಿತ ಸಂಗತಿಯೊಂದನ್ನು ಅಪರಿಚಿತವೆಂಬಂತೆ ತೋರಿಸುವ ಮೂಲಕ ಹೊಸದೊಂದು ನೋಟವನ್ನೇ ತೆರೆಸುವುದು ಒಳ್ಳೆಯ ನಾಟಕ ಮತ್ತು ರಂಗಭೂಮಿಗಳ ಗುರಿ – ಎಂಬುದು ಬರ್ಟೋಲ್ಟ್ ಬ್ರೆಖ್ಟ್ನ ಸುಪ್ರಸಿದ್ಧ ನಿಲುವು. ಇದುವರೆಗೆ ಬಂದ ಈ ಜಗತ್ತಿನ ಯುದ್ಧವಿರೋಧಿ ನಾಟಕಗಳಲ್ಲೇ ಅತ್ಯುತ್ತಮವಾದದ್ದು ಎಂದು ಕರೆಯಲಾಗಿರುವ ಈ `ಮದರ್ ಕರೇಜ್…’ ಎಂಬ ನಾಟಕವೂ ಅಂಥದೇ ಕೆಲಸ ಮಾಡುತ್ತದೆ. ಯುದ್ಧಗಳು ರಾಷ್ಟ್ರಗಳ ನಡುವೆ, ಧರ್ಮಗಳ ನಡುವೆ, ಸಮುದಾಯಗಳ ನಡುವೆ ಜರುಗುವ ಸಂಘರ್ಷ ಎಂಬುದು ಮೇಲ್ನೋಟಕ್ಕೆ ಕಾಣಿಸುವ ತಿಳುವಳಿಕೆಯಾದರೆ, ಈ ನಾಟಕವು ಹಾಗಲ್ಲವೆಂದೂ, ಮೂಲತಃ ಯುದ್ಧಗಳು ರಾಷ್ಟ್ರ-ಧರ್ಮ-ಸಮುದಾಯಗಳಿಗೆ ಲಾಭದಾಯಕವಾದ ಒಂದು ಅತ್ಯುಪಯುಕ್ತ ವಹಿವಾಟು ಎಂದೂ ಕಾಣಿಸುತ್ತದೆ. ತಳ್ಳುಗಾಡಿಯ ಅಂಗಡಿಯೊಂದರ ಜತೆ ರಣರಂಗದಲ್ಲಿ ಸಂಸಾರಸಮೇತ ಸಾಗುತ್ತ, ಯುದ್ಧ ನಿಲ್ಲದಿರಲಿ ಎಂದು ಹಾರೈಸುವ ಒಬ್ಬ ಮುದುಕಿ ಈ ನಾಟಕದ ಕೇಂದ್ರ ಪ್ರತಿಮೆ; ಆಕೆ ತನ್ನೆಲ್ಲ ಸಂಸಾರವನ್ನೇ ಕಳೆದುಕೊಂಡರೂ ತನ್ನ ದುರಾಸೆಯನ್ನು ಮಾತ್ರ ಬಿಡದೆ ಮುನ್ನುಗ್ಗುವುದು ಈ ನಾಟಕದ ಕೇಂದ್ರ ವ್ಯಂಗ್ಯ. ಯುದ್ಧ ನಿಜವಾಗಿ ಹುಟ್ಟುವುದು ಮನುಷ್ಯರ ಮನಸ್ಸಿನೊಳಗೆ ಎಂಬ ದಾರ್ಶನಿಕ ನೋಟವನ್ನು ಇಹಲೋಕದ ಭೌತಿಕ ಸಂಗತಿಗಳ ಚಕಮಕಿಯಲ್ಲೇ ಕಾಣುವಂತೆ ಮಾಡುವುದು ಈ ನಾಟಕದ ಮರ್ಮ.
ಬೆಲೆ ರೂ 160/-

ದರೋಡೆಕೋರರು
ಫ್ರೀಡ್ರಿಷ್ ಶಿಲರ್
ಕನ್ನಡಕ್ಕೆ: ಮಾಧವ ಚಿಪ್ಪಳಿ
ಹದಿನೆಂಟನೆಯ ಶತಮಾನದ ಪ್ರಸಿದ್ಧ ಜರ್ಮನ್ ನಾಟಕಕಾರ ಫ್ರೀಡ್ರಿಷ್ ಶಿಲರ್ ಬರೆದ ಮೊದಲ ಕೃತಿ – ‘ದರೋಡೆಕೋರರು’. ೧೭೮೧ರಲ್ಲಿ ಪ್ರಕಟವಾದ ಈ ನಾಟಕವನ್ನು ಶಿಲರ್ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ಹೊತ್ತಿಗೇ ಬರೆಯುತ್ತಾನೆ. ಮೇಲು ನೋಟಕ್ಕೆ ಇದೊಂದು ಸಹೋದರರ ನಡುವಿನ ಆಸ್ತಿ ವ್ಯಾಜ್ಯ, ಹಳಸಿ ಹೋದ ತಂದೆ ಮಕ್ಕಳ ಸಂಬಂಧ, ಒಬ್ಬ ಹುಡುಗಿಯನ್ನು ಒಬ್ಬರಿಗಿಂತ ಹೆಚ್ಚು ಗಂಡಸರು ಪ್ರೀತಿಸುವ ಕತೆ – ಹೀಗೆ ಬಹಳ ಹೊಸತು ಅನ್ನಿಸದ ವಿಷಯಗಳ ಸುತ್ತಲೇ ಹೆಣೆದಿರುವ ನಾಟಕ. ಆದರೆ ನಾವು ಇದನ್ನು ಓದುತ್ತಾ ಹೋದಂತೆ ಮನುಷ್ಯ ಸ್ವಭಾವದ ಸೂಕ್ಷ್ಮಗಳು, ಆದರ್ಶವಾದಿಯೊಬ್ಬನ ದೃಷ್ಟಿಗೂ ಬದುಕಿನ ವಾಸ್ತವಕ್ಕೂ ನಡುವೆ ಇರುವ ಕಂದಕ ಮೊದಲಾದ ವಿಚಾರಗಳನ್ನು ಮುನ್ನೆಲೆಗೆ ತರುವುದು ಗೋಚರಿಸುತ್ತದೆ. ಆ ಕಾಲದ ಜರ್ಮನಿಯ ಇತಿಹಾಸ, ಕಾರ್ಲ್ನ ಶಾಲೆಯ ವಿವರಗಳೆಲ್ಲ ಗೊತ್ತಿರುವ ಓದುಗರಿಗೆ ಶಿಲರ್ ಬದುಕಿನ ಬಗ್ಗೆ ಹೊಂದಿದ್ದ ದೃಷ್ಟಿಕೋನವನ್ನು ಬಿಚ್ಚಿಡುವ ನಾಟಕವೂ ಹೌದು.
ಬೆಲೆ ರೂ 275/-

ಸಂತೆಯಲ್ಲಿ ನಿಂತ ಮುದುಕಿ
ವೈದೇಹಿ
ಈ ಪುಸ್ತಕದಲ್ಲಿ ಎರಡು ಬಗೆಯ ಬರಹಗಳಿವೆ. ಮೊದಲನೆಯದು, ನಮ್ಮ ನಡುವಲ್ಲೇ ಸುತ್ತಮುತ್ತ ಇರುವ ಸಾದಾ ಜನರೊಡನೆ ನಡೆಸಿದ ಸಂವಾದಗಳ ದಾಖಲೆ. ನಮ್ಮ ಕಾಲ, ನಮ್ಮ ನಾಡು ಮತ್ತು ಅದರೊಳಗೆ ಹುಟ್ಟುತ್ತಿರುವ ಸುಖದುಃಖಗಳೂ ಆತಂಕಗಳೂ ಈ ಮಾತುಕತೆಯ ಸುತ್ತ ಹಬ್ಬಿಕೊಂಡಿವೆ. ಒಂದು ರೀತಿಯಿಂದ ಈ ಬರಹಗಳು ನಮ್ಮ ನಡುವೆ ಇನ್ನೂ ಕಥೆಯಾಗದೆ ಉಳಿದಿರುವ ಕಥಾನಕಗಳು… ಇನ್ನು ಎರಡನೆಯ ಭಾಗದ ಲೇಖನಗಳು ಸಂದರ್ಭಾನುಸಾರ ನಮ್ಮ ನಾಡಿನ ಹತ್ತು ಹಲವು ಪತ್ರಿಕೆಗಳಿಗೆ ಬರೆದುಕೊಟ್ಟ ಬರಹಗಳು. ಇವು ನಮ್ಮ ಕಾಲದೇಶಗಳನ್ನು ಕುರಿತು ಲೇಖಕರ ಮನದೊಳಗೆ ಮೂಡಿದ ಚಿತ್ರಗಳು. ಅಥವಾ ಇವು ಕೂಡಾ ಕಥೆಯಲ್ಲದ ಕಥನಗಳು..
ಬೆಲೆ ರೂ 370/-

ನೆನಪು ನೀಲಾಂಜನ
ವೈದೇಹಿ
ಇದೊಂದು ಅಪರೂಪದ ಬರವಣಿಗೆ. ಇದು ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಯಾವುದೇ ಕೃತಿಯ ನೇರ ಅನುವಾದವಲ್ಲ. ಅಥವಾ ಅವರ ಜೀವನಗಾಥೆಯ ಸಂಗ್ರಹವೂ ಅಲ್ಲ. ಇದು ಕಮಲಾದೇವಿ ಎಂಬ ವ್ಯಕ್ತಿತ್ವಕ್ಕೆ, ಅಂಥದೊಂದು ವ್ಯಕ್ತಿಮಾದರಿಗೆ ಪ್ರತಿಸ್ಪಂದಿಯಾಗಿ ಹುಟ್ಟಿದ ಒಂದು ಕೃತಿ. ಈ ಕೃತಿಯ ನಿರೂಪಕರಾದ ವೈದೇಹಿ ಅವರು ಕಮಲಾದೇವಿ ಅವರ ಕೆಲ ನೆನಪುಗಳ ಅಂತರ್ನಿರೂಪಣೆ ಯೊಂದನ್ನು ಇಲ್ಲಿ ಕಟ್ಟಿದ್ದಾರೆ. ಈ ನಿರೂಪಣೆಯ ಎಳೆಯನ್ನು ಹಿಡಿದು ಪ್ರತಿಯೊಬ್ಬ ಓದುಗರೂ ಸ್ವಾತಂತ್ರ್ಯದ ಹಿಂದುಮುಂದಿನ ನವಭಾರತದ ಬಗೆಬಗೆಯ ಕಥನಗಳನ್ನು ತಮ್ಮತಮ್ಮದೇ ಅಂತರಂಗದ ಮನೋಭೂಮಿಕೆಯೊಳಗೆ ರೂಪಿಸಿಕೊಳ್ಳುವ ಧ್ವನಿಶಕ್ತಿಯನ್ನು ಈ ನಿರೂಪಣೆ ಉದ್ದೀಪಿಸುವಂತಿದೆ. ಜತೆಗೆ, ಸ್ವಗತದ ಧಾಟಿಯಲ್ಲಿ ಸಾಗುವ ಈ ನಿರೂಪಣೆಯನ್ನು ರಂಗಾಸಕ್ತರು ಒಂದು ನಾಟಕಪ್ರಯೋಗವಾಗಿಯೂ ರೂಪಿಸಬಹುದಾದ ಸಾಧ್ಯತೆ ಈ ಕಥನಕ್ಕಿದೆ.
ಬೆಲೆ ರೂ 225/-




































































































