Description
ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ; ಆದರೆ, ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಳ್ಳುವುದು ಕಷ್ಟದ ಹಾದಿ. ವಿವೇಕ ಶಾನಭಾಗ ಅವರ ಈಚಿನ ಕಥೆಗಳು, ಈ ಎರಡನೆಯ ಜಾತಿಯ ದುರ್ಗಮ ದಾರಿಗಳನ್ನು ಹುಡುಕಲು ಹೊರಟಂತಿವೆ. ಉದಾಹರಣೆಗೆ, ಈ ಸಂಕಲನದ ಒಂದು ಕಥೆಯಲ್ಲಿ – ‘ಒಬ್ಬ’ನ ಸಾದಾ ಸಂಸಾರದೊಳಗೆ, ಇದ್ದಕ್ಕಿದ್ದಂತೆ ‘ಮತ್ತೊಬ್ಬ’ನ ನೆರಳು ಕಾಣಿಸತೊಡಗುತ್ತದೆ. ಅದಕ್ಕಿಂತ ಭಿನ್ನವಾದ ಇನ್ನೊಂದು ಕಥೆಯಲ್ಲಿ – ಊರಿಗೆಲ್ಲ ‘ನಿಗೂಢ’ವೆನ್ನಿಸುವಾಕೆ, ಮತ್ತೊಮ್ಮೆ ಏನೂ ವಿಶೇಷವಿಲ್ಲದ ಸಾಧಾರಣ ಹೆಂಗಸೂ ಆಗಿ ಕಾಣಿಸಿಕೊಳ್ಳುತ್ತಾಳೆ. ಅದೇ ರೀತಿ – ಶಾಲಾ ಮಾಸ್ತರ, ಕಿರಾಣಿ ಅಂಗಡಿಯಾತ – ಇಂಥ ಪರಿಚಿತರು ಇಲ್ಲಿ ತಟ್ಟನೆ ಅಪರಿಚಿತರೂ ಆಗಿ ಗೋಚರಿಸತೊಡಗುತ್ತಾರೆ. ಶಿರಸಿ, ಕುಮಟಾ, ಅಂಕೋಲಾದ ಸುತ್ತಮುತ್ತಲೇ ಚಿಗುರುವ ಇಲ್ಲಿಯ ಹಲವು ಕಥನಗಳು, ಹಠಾತ್ತನೆ ತಮ್ಮ ಅದೃಶ್ಯ ಬೇರುಗಳನ್ನು ದೂರದೂರದ ಪುಣೆ-ರಂಗೂನಿನವರೆಗೂ ಹಬ್ಬಿಸಿಕೊಳ್ಳತೊಡಗುತ್ತವೆ. ಇಂಥ ಎಲ್ಲ ಕಥನಕ್ರಮಗಳ ಮೂಲಕ ವಿವೇಕರು ಪ್ರಯತ್ನಿಸುತ್ತಿರುವುದಾದರೂ ಏನನ್ನು? ಮೇಲ್ನೋಟಕ್ಕೆ ಒಂದಾಗಿ ಕಾಣುವ ಗ್ರಹೀತ-ವಾಸ್ತವದಲ್ಲಿ ಕಾಲು ನೆಟ್ಟುಕೊಂಡೇ, ಅದರೊಳಗೆ ಹುದುಗಿರುವ ಸಾಧ್ಯ-ವಾಸ್ತವಗಳನ್ನು ಹುಡುಕುವುದು ಈ ಕಥನದ ಪ್ರೇರಣೆಯಾಗಿರಬಹುದೆ? ಅಥವಾ ಇನ್ನೊಂದು ನೆಲೆಯಿಂದ, ದೇಶದೇಶಗಳ ವ್ಯಾಪಾರೋದ್ಯಮಗಳನ್ನು ಜೋಡಿಸತೊಡಗಿರುವ ಇವತ್ತಿನ ತಥಾಕಥಿತ ‘ಜಾಗತಿಕ’ ವ್ಯವಸ್ಥೆಗೆ ಪ್ರತಿಯಾಗಿ, ಇನ್ನೊಂದು ನೆಲೆಯಲ್ಲಿ ನಡೆಯಬಹುದಾದ ಕಾಲಸಂಶ್ಲೇಷಣೆ ಮತ್ತು ಸ್ಮೃತಿಸಂಶ್ಲೇಷಣೆಗಳನ್ನು ಸೂಚಿಸುವುದು ಈ ಕಥೆಗಳ ಆಶಯವಿದ್ದೀತೆ? ಇಂಥ ಹಲವಾರು ತಾತ್ವಿಕ ಪ್ರಶ್ನೆಗಳನ್ನು ಓದುಗರಲ್ಲಿ ಹುಟ್ಟಿಸಬಲ್ಲ ಸಾಮರ್ಥ್ಯ ಈ ಕಥಾಸಂಕಲನಕ್ಕಿದೆ.
– ಅಕ್ಷರ ಕೆ.ವಿ.
Reviews
There are no reviews yet.