Description
ಪ್ರಬಂಧದ ವ್ಯಾಪ್ತಿ ದೊಡ್ಡದು: ‘ಭೂಮಿ ಮತ್ತು ಮನುಷ್ಯ’, ‘ಕಾಲ ಮತ್ತು ಮನುಷ್ಯ’, ‘ಕಾಮ ಮತ್ತು ಮನುಷ್ಯ’, ‘ಸಮಾಜ ಮತ್ತು ಮನುಷ್ಯ’- ಹೀಗೆ ನಾಲ್ಕು ಭಾಗಗಳಲ್ಲಿರುವ ಪ್ರಬಂಧ, ಕನ್ನಡ ಕಾವ್ಯದ ಮುಖ್ಯ ಕಾಳಜಿಗಳನ್ನು ಪರೀಕ್ಷಿಸುವುದರ ಜೊತೆಯಲ್ಲೆ, ಕನ್ನಡದ ಎಲ್ಲ ಮುಖ್ಯ ಆಧುನಿಕ ಕವಿಗಳ ಮೇಜರ್ ಎನ್ನಬಹುದಾದ ಕೃತಿಗಳೆಲ್ಲವನ್ನೂ ಆಳವಾಗಿ, ಸೂಕ್ಷ್ಮವಾಗಿ ಒಂದು ಕೇಂದ್ರ ದೃಷ್ಟಿಕೋನದ ಪ್ರವೇಶಕ್ಕೆ ಸಿಕ್ಕುವಂತೆ ಚರ್ಚಿಸಲು ಪ್ರಬಂಧದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಎಲ್ಲೂ ಪ್ರಬಂಧದ ವ್ಯಾಪ್ತಿ ಕೃತಕವೆನ್ನಿಸುವುದಿಲ್ಲ. ಲೇಖಕನ ದೃಷ್ಟಿಕೋನಕ್ಕೆ ಅಧೀನವಾಗಿ ಇಡೀ ಚರ್ಚೆ ಮೊದಲಿಂದ ಕೊನೆಯವರೆಗೆ ಹಲವು ಕವಿಗಳ ಹಲವು ಕವನಗಳನ್ನು ಸಹಜವಾಗಿ ಒಳಗೊಳ್ಳುತ್ತಾ ಬೆಳೆಯುತ್ತಾ ಹೋಗಿದೆ.
ಲೇಖಕರ ದೃಷ್ಟಿಕೋನ ಮೇಲೆ ಹೇಳಿದ ಬೀಸಿನಲ್ಲಿ ಇಡಿಯಾಗಿ ಆಧುನಿಕ ಕನ್ನಡ ಕಾವ್ಯವನ್ನು ಪರೀಕ್ಷಿಸುವಾಗ ತಾರತಮ್ಯ ವಿವೇಚನೆಯನ್ನು ಕಳೆದುಕೊಳ್ಳದ ಸಾಹಿತ್ಯ ವಿಮರ್ಶೆಯ ಎಚ್ಚರವನ್ನೂ, ತಾತ್ವಿಕ ವ್ಯಾಖ್ಯಾನಕ್ಕೆ ಅಗತ್ಯವಾದ ವೈವಿಧ್ಯದ ಉದಾರ ಗ್ರಹಿಕೆಯನ್ನೂ ಒಂದಕ್ಕೊಂದು ವಿರೋಧವಾಗದಂತೆ ಒಳಗೊಂಡಿರುವುದು ಈ ಪ್ರಬಂಧದ ಇನ್ನೊಂದು ವಿಶೆಷವಾಗಿದೆ. ಲೇಖಕರ ‘ಮಾರ್ಕ್ಸಿಸ್ಟ್’ ಎನ್ನಬಹುದಾದ ದೃಷ್ಟಿಕೋನ ಎಲ್ಲೂ ಒರಟಾಗಿ ಕೆಲಸ ಮಾಡಿಲ್ಲ. ಕಾವ್ಯದ ಆತ್ಮನಿಷ್ಠ ಅನುಭವದ ವಿಶ್ಲೇಷಣೆಯನ್ನು ಸೂಕ್ಷ್ಮವಾದ ವೈಜ್ಞಾನಿಕ ಮಾರ್ಕ್ಸ್‌ವಾದೀ ದೃಷ್ಟಿ ಓದುಗನ ರಸಗ್ರಹಣದ ಶಕ್ತಿಗೆ ಕುಂದು ಬಾರದಂತೆ ಮಾಡಬಲ್ಲುದೆಂಬುದನ್ನೂ, ಹಾಗೆ ಮಾಡಿದಾಗ ಮಾತ್ರ ಮಾರ್ಕ್ಸ್‌ವಾದವೂ ಸಾಹಿತ್ಯದಿಂದ ಕಲಿಯಬಲ್ಲುದೆಂಬುದನ್ನೂ ಶ್ರೀ ಡಿ. ಆರ್. ನಾಗರಾಜರು ಈ ಪ್ರಬಂಧದಲ್ಲಿ ರುಜುವಾತುಪಡಿಸಿದ್ದಾರೆ.
-ಯು. ಆರ್. ಅನಂತಮೂರ್ತಿ
Reviews
There are no reviews yet.