Description
ಈ ಕೈಪಿಡಿ ಗಾಂಧೀಜಿ ಮುಂತಾದ ಆಧುನಿಕ ನೇತಾರರ ಉದಾರ ದೃಷ್ಟಿಕೋನದಿಂದ ಹಿಂದುಧರ್ಮವನ್ನು ಪರಿಚಯಿಸುತ್ತದೆ. ಹಿಂದುಧರ್ಮ ಅನೇಕ ತಪ್ಪು ಕಲ್ಪನೆಗಳಿಗೆ ಬಲಿಯಾಗಿದೆ. ಹೀಗಾಗಿ ಯಾವುದು ಹಿಂದುಧರ್ಮ, ಯಾವುದು ಅಲ್ಲ ಎಂಬುದನ್ನು ಈ ಪುಸ್ತಕದ ಮೊದಲನೆಯ ಭಾಗ ತಿಳಿಸುತ್ತದೆ. ಹಿಂದುಧರ್ಮ ಬ್ರಾಹ್ಮಣರು ರಚಿಸಿದ್ದುದು; ಮಡಿ-ಮೈಲಿಗೆ, ಅಸ್ಪೃಶ್ಯತೆ ಮತ್ತು ಜಾತಿಪದ್ಧತಿಗಳು ಅದರ ಜೀವಾಳ – ಇಂತಹ ಭ್ರಮೆಗಳ ನಿರಸನವನ್ನು ಮಾಡುವದರ ಜೊತೆಗೆ, ಈ ಧರ್ಮದ ನೈಜ ಅಂಶಗಳಾದ ಪರತತ್ವ ವಿಚಾರ, ನೀತಿ ಅಥವಾ ಚಾರಿತ್ರ್ಯ ಬೋಧನೆ, ಮತ್ತು ಸಾಧನೆಯ ಮಾರ್ಗಗಳನ್ನು ಮೊದಲ ಭಾಗ ವಿವರಿಸುತ್ತದೆ. ಎರಡನೆಯ ಭಾಗವು ಪ್ರಾಚೀನ ಕಾಲದಿಂದ ಇಂದಿನವರೆಗೆ ಹಿಂದು ಧರ್ಮ ನಡೆದುಬಂದ ರೀತಿಯನ್ನು ವರ್ಣಿಸುತ್ತದೆ. ವೇದೋಪನಿಷತ್ತುಗಳ ಧರ್ಮವು ಭಕ್ತಿ ಚಳುವಳಿಗಳಿಂದ ಹೇಗೆ ಜನ ಸಾಮಾನ್ಯರಿಗೂ ಮುಟ್ಟುವಂತಾಯಿತು, ಆಧುನಿಕ ನೇತಾರರ ಅರ್ಥೈಸುವಿಕೆಯಿಂದ ಅದು ಹೇಗೆ ಸಮನ್ವಯ ಪಡೆದು ವೈಶ್ವಿಕವೂ ಆಯಿತು, ಎಂಬುದರ ರೋಚಕ ಇತಿಹಾಸವನ್ನು ದೃಷ್ಟಾಂತಗಳನ್ನು ಕೊಟ್ಟು, ಮುಖ್ಯ ಪಾತ್ರಧಾರಿಗಳ ಕಾರ್ಯಗಳನ್ನು ಬಣ್ಣಿಸಿ, ಈ ಪುಸ್ತಕವು ವಿಶ್ಲೇಷಿಸುತ್ತದೆ. ಹಿಂದುಧರ್ಮಕ್ಕೆ ಸ್ಥೈರ್ಯವೂ ಇದೆ, ಚಲನಶೀಲತೆಯೂ ಇದೆ, ಕಾಲಕಾಲಕ್ಕೆ ಬೇಕಾದ ಬದಲಾವಣೆಗಳನ್ನೂ ಮಾಡಿಕೊಳ್ಳುವ ಪ್ರವೃತ್ತಿಯೂ ಇದೆ ಎಂದು ಈ ಪುಸ್ತಕವು ಸಾಧಿಸುತ್ತದೆ. ಸಂಕುಚಿತ ಮನೋವೃತ್ತಿ, ಅಸಹಿಷ್ಣುತೆ, ಮತಾಂಧತೆ, ಮತ್ತು ಸಮಾಜಘಾತಕ ರೂಢಿಗಳು, ವೈವಿಧ್ಯಗಳಿಂದ ಸಮೃದ್ಧವಾದ ಹಿಂದುಧರ್ಮಕ್ಕೆ ವಿಸಂಗತವಾಗಿವೆಯೆಂದೂ ಇದು ಸಾರುತ್ತದೆ.
ಆಳವಾದ ಸಂಶೋಧನೆಯ ಮೇಲೆ ಆಧರಿಸಲ್ಪಟ್ಟಿದ್ದು, ಅನೇಕ ಒಳನೋಟಗಳು, ಶ್ಲೋಕಗಳು, ಹಾಡುಗಳು, ಐತಿಹ್ಯಗಳು ಈ ಕೈಪಿಡಿಯ ಮನೋರಂಜಕತೆಯನ್ನು ಹೆಚ್ಚಿಸುತ್ತವೆ.
Reviews
There are no reviews yet.