Description
ಊರು ಸಣ್ಣದು. ಆದರೆ ಸ್ಥಳ ಪುರಾಣ ಸಣ್ಣದಲ್ಲ. ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಹೇಳಿರುವ ಹಾಗೆ ಈ ಪರ್ವತ ಶ್ರೇಣಿಗಳು ಸೃಷ್ಟಿಯಾಗಿದ್ದು ವರಾಹಾವತಾರದ ಕೊಟ್ಟಕೊನೇಗೆ. ಇನ್ನು, ವಿಜ್ಞಾನೆಗಳ ಪುರಾಣ ಕೇಳುವುದಾದರೆ ಈ ಪರ್ವತ ಶ್ರೇಣಿಯ ವಯಸ್ಸು ಮುನ್ನೂರಾ ಐವತ್ತು ಕೋಟಿ ವರ್ಷ… ಸರಿ, ಅಂದಿನಿಂದ ಇಂದಿನ ನಡುವೆ ಈ ಸಹ್ಯಾದ್ರಿಗೆ ಹಸುರಿನ ದಪ್ಪನೆಯ ಹೊದಿಕೆ ಬಂದಿದೆ. ಆ ಹೊದಿಕೆಯ ಒಳಗೆ ಜೀವಜಾಲದ ಒಂದು ಬ್ರಹ್ಮಾಂಡವೇ ಸೃಷ್ಟಿಯಾಗಿದೆ. ಸಹ್ಯಾದ್ರಿ ಖಂಡದ ಈ ಆಗರ್ಭ ಜೀವಜಗತ್ತಿನ ಬ್ರಹ್ಮಾಂಡದೊಳಕ್ಕೆ ನಾಗರಿಕ ಜಗತ್ತಿನ ರಸ್ತೆಯ ಪ್ರವೇಶ ಆಗಿದ್ದು ಈಗ ಸುಮಾರು ನೂರು ನೂರೈವತ್ತು ವರ್ಷಗಳ ಹಿಂದೆ. ಮೊದಲು ಮಾರಿಪೇಟಿಗೆ ಲಾರಿ ಬಂತು. ಕೊಡಲಿಯ ಬದಲು ಗರಗಸ ಬಂತು. ಆಮೇಲೆ ಅಣೆಕಟ್ಟು ಬಂತು. ವಿದ್ಯುತ್ ಬಮ್ತು, ಬುಲ್‌ಡೋಜರ್ ಬಂತು. ಪ್ರಗತಿಯ ಕುದುರೆಯ ಈ ನಾಗಾಲೋಟನ ಈಚಿನ ಹೆಜ್ಜೆ ಅಂತಂದರೆ, ಒಂದು ಅಣುವಿದ್ಯುತ್ ಕೇಂದ್ರ. ಒಂದು ಕಡೆಗೆ ಕುವೆಂಪು ಹಾಡು, ಇನ್ನೊಂದು ಕಡೆಗೆ ಅಣುವಿದ್ಯುತ್ ಕೇಂದ್ರ; ಒಂದು ಕಡೆಗೆ ಸೆಟೆದು ನಿಂತಿರೋ ಚಳುವಳಿಗಾರರು, ಇನ್ನೊಂದು ಕಡೆಗೆ ಇದನ್ನು ತಲೆಗೇ ಹಚ್ಚಿಕೊಳ್ಳದ ಕೂಲಿಕಾರರು; ಒಂದು ಕಡೆಗೆ ವಿದ್ಯುತ್ ಕ್ಷಾಮ, ಇನ್ನೊಂದು ಕಡೆಗೆ ಆಟಂಬಾಂಬು… ಇಂಥವರ ಮಧ್ಯೆ ಆಗಬಾರದ್ದು ಆಗಿ ಹೋಯಿತು. ಸಹ್ಯಾದ್ರಿ ಖಂಡದ ಸ್ಥಳ ಪುರಾಣಗಳ ಗೋಜಲಿನೊಳಕ್ಕೆ ಇನ್ನೊಂದು ಉಪಕಥೆ ಸೇರಿಹೋಯಿತು. ಈಗ ನಾಲ್ಕು ದಿನಗಳ ಕೆಳಗೆ ಆ ಅಣುವಿದ್ಯುತ್ ಕೇಂದ್ರದಲ್ಲಿ ಒಂದು ಸ್ಫೋಟ ಆಯಿತು. ಇಲ್ಲಿಂದ ನಮ್ಮ ಕಥೆ ಪ್ರಾರಂಭ. ಹಿಂದೆ ಹೇಳಿದ್ದೆಲ್ಲ ಒಂದು ರೀತಿಯ ಪುರಾಣ. ಮುಂದಿನದು ಇನ್ನೊಂದು ರೀತಿಯ ಪುರಾಣ. ಹಿಂದಿನದು ಸಹ್ಯಾದ್ರಿ ಖಂಡ… ಮುಂದಿನದು ಸಹ್ಯಾದ್ರಿ ಕಾಂಡ!
Reviews
There are no reviews yet.