Description
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ ಕಾಗೋಡು. ಆದರೆ ಅಂಥದೇ ಅಸಂಖ್ಯಾತ ಹಳ್ಳಿಗಿಲ್ಲದ ಒಂದು ದೊಡ್ಡಸ್ತಿಕೆ ಕಾಗೋಡಿಗಿದೆ. ಅದು 1950-52ರಲ್ಲಿ ನಡೆದ ಕಾಗೋಡು ರೈತ ಸತ್ಯಾಗ್ರಹ. ಗೇಣಿ ಅಳೆಯುವ ಕೊಳಗದ ಪ್ರಮಾಣದ ಬಗ್ಗೆ ಎದ್ದ ತಕರಾರು ಇಂಥ ಒಂದು ರೈತ ಸತ್ಯಾಗ್ರಹವಾಗಿ ಬೆಳೆದು ಆ ಸಂದರ್ಭದಲ್ಲಿ ರೈತರ ಪಾಲಿಗೆ ವಿಫಲವಾಗಿ ಕೊನೆಗೊಂಡಿತು. ಪ್ರಸ್ತುತ ಪುಸ್ತಕ ಇಡೀ ಸತ್ಯಾಗ್ರಹದ ಹಿನ್ನೆಲೆ, ಅದು ನಡೆದ ರೀತಿ ಮತ್ತು ಅದರ ಸಫಲತೆ ವಿಫಲತೆಗಳನ್ನು ಗಮನಿಸುತ್ತ ಭಾರತದ ಸಮಾಜವಾದೀ ಆಂದೋಲನಗಳ ಬಗ್ಗೆಯೇ ಒಂದು ಅರಿವನ್ನು ಮೂಡಿಸಿಕೊಡುತ್ತದೆ.
ಸೋಮಾರಿಗಳು ಮತ್ತು ನಿಂತ ನೀರಿನ ಹಾಗೆ ಜಡರು ಎಂದು ಕರೆಯಿಸಿಕೊಳ್ಳುವ ಇಂಥ ಒಂದು ರೈತ ಸಮುದಾಯದಲ್ಲಿ ಕಾಗೋಡು ಸತ್ಯಾಗ್ರಹದಂಥ ಪ್ರತಿಕ್ರಿಯೆ ಹುಟ್ಟಿದ್ದು ಹೇಗೆ? ಕ್ರಾಂತಿಕಾರಕವಾಗಿ ಹುಟ್ಟಿದ ಇಂಥ ಚಳುವಳಿಗೆ ಅಂದಿನ ಸರ್ಕಾರ, ಪತ್ರಿಕೆ, ಬುದ್ಧಿಜೀವಿಗಳು ಮತ್ತು ರಾಜಕೀಯ ಪಕ್ಷಗಳು ಪ್ರತಿಸ್ಪಂದಿಸಿದ್ದು ಹೇಗೆ? ಉತ್ಸಾಹದಿಂದ ಪ್ರಾರಂಭವಾದ ಈ ಚಳುವಳಿ ನೀರಸವಾಗಿ ಕೊನೆಗೊಂಡಿದ್ದೇಕೆ? ನಮ್ಮ ರೈತ ಸಮುದಾಯಕ್ಕೆ ಪ್ರಾತಿನಿಧಿಕವಾದ ಇಂಥ ಒಂದು ಚಳುವಳಿ ರಾಜ್ಯಾದ್ಯಂತ ಯಾಕೆ ವ್ಯಾಪಿಸಲಿಲ್ಲ? ಸೀಮಿತ ಉದ್ದೇಶದಿಂದ ಆರಂಭವಾದ ಈ ಚಳುವಳಿ ವಿಸ್ತೃತವಾಗಿ ಈ ವ್ಯವಸ್ಥೆಯನ್ನೇ ಯಾಕೆ ಪ್ರಶ್ನಿಸಲಿಲ್ಲ? – ಇಂಥ ಮೂಲಭೂತ ಪ್ರಶ್ನೆಗಳಿಗೆ ಈ ಪುಸ್ತಕ ಉತ್ತರ ಹುಡುಕುತ್ತದೆ.
ಗಂಭೀರ ವಿಷಯಗಳನ್ನು ಪ್ರೀತಿ ಶ್ರದ್ಧೆಯಿಂದ ಅಭ್ಯಾಸ ಮಾಡಿ ಸ್ಪಷ್ಟವಾಗಿ ತಿಳಿಯಾಗಿ ಖಚಿತವಾಗಿ ಬರೆಯಬಲ್ಲ ಕನ್ನಡದ ವಿರಳ ಲೇಖಕರಲ್ಲೊಬ್ಬರಾದ ಜಿ. ರಾಜಶೇಖರ್ ಕಾಗೋಡು ಚಳುವಳಿಯ ಬಗ್ಗೆ ಬರೆದಿರುವ ಈ ಪುಸ್ತಕ ಇಂಥ ಪ್ರಯತ್ನಗಳಿಗೆ ಆದರ್ಶವೆನ್ನುವಂತಿದೆ.
Reviews
There are no reviews yet.