Description
ಕಮಲಾಕರ ಕಡವೆಯವರು ಈ ಕವನ ಸಂಕುಲದಲ್ಲಿ ಶಬ್ದಗಳು ಇಡಿಕಿರಿದು ತುಂಬಿದ್ದರೂ ಪ್ರತಿ ಎರಡು ಶಬ್ದಗಳ ನಡುವೆ ಹಲವು ಮೌನಗಳು ತಲೆಮರೆಸಿಕೊಂಡು ಕೂತಿವೆ- ದಿಟ್ಟಿಯಿಡುವಷ್ಟು ದೂರ ತುಂಡರಿಸದೆ ಹರಡಿರುವ ದಟ್ಟ ಕಾನನದ ನಡುವೆಯೂ ಹರಿವ ಹಾರುವ ಎರಗಿ ಎಗರುವ ಬಗೆಬಗೆಯ ಪ್ರಾಣಿಗಳ ಆವಾಸಕ್ಕೆ ತೆರಪಿರುವ ಹಾಗೆ…
ಕಾವ್ಯವೆಂದರೆ ಅಕ್ಕಪಕ್ಕದ ಶಬ್ದಗಳ ಸಹಬಾಳ್ವೆಯೆಂದು ನಂಬಿ ಈ ಕಾನನವ ಹೊಕ್ಕರೆ ನಮಗಲ್ಲಿ ಅಚ್ಚರಿಯ ಮೊತ್ತಗಳು ಧುತ್ತನೆ ಎದುರಾಗುತ್ತವೆ- ಪದಪದಕ್ಕೂ ಇಲ್ಲಿ ಹಲವೊಮ್ಮೆ ಹೊಯ್ದಕ್ಕಿ ಬೇಯವುದಿಲ್ಲ, ಪ್ರತಿಮೆಪ್ರತಿಮೆಗಳು ಕೈಕೈ ಹಿಡಿದು ಗಂಡಹೆಂಡಿರ ಹಾಗೆ ನಡೆಯುವುದಿಲ್ಲ, ಬದಲು, ಹಗ್ಗಜಗ್ಗಾಟದ ಸ್ಪರ್ಧಾಳುಗಳ ಹಾಗೆ ಆಚೀಚೆ ಜಗ್ಗುತ್ತವೆ…
ಇಷ್ಟೂ ಸಾಲದೆಂಬಂತೆ, ಕನ್ನಡಕ್ಕೆ ಇಲ್ಲಿ ಹಿಂದಿ ಮರಾಠಿ ಇಂಗರೇಜಿಗಳ ಕಲಬೆರಕೆ…
ಅಂಥ ಬೆರಕೆ ಕಲಾಗಾರಿಕೆಯಲ್ಲಿ ಸೃಷ್ಟಿಯಾಗಿವೆಯಿಲ್ಲಿ ಹಲಬಗೆಯ ಲೋಕಗಳು; ಅಥವಾ ಲೋಕದ ಗ್ರಹಿಕೆಗಳು; ಅಥವಾ ಅಂಥ ತುಣುಕುಗಳು- ಕೆಲವೊಮ್ಮೆ ಅವು ಬಹಿರಿಂದ್ರಿಯಗಳಿಗೆ ಸಿಕ್ಕುವ ದೃಶ್ಯಶ್ರವ್ಯ ಮಾಹಿತಿಗಳು; ಕೆಲವೊಮ್ಮೆ ಅವು ಕೇವಲ ಮನಸ್ಸಿನಾಳದ ಮುರುಕು ಆಟಿಕೆಯ ತುಂಡುಗಳು. ಕೆಲವೋ, ಅವು ಕವಿಯ ಭಾವದಲ್ಲಿ ಕೂಡಿ ಪದ್ಯಕ್ಕೆ ಬಂದಮೇಲೆ ತುಂಡಾಗಿ ಬಿದ್ದಂಥವು; ಇನ್ನು ಕೆಲವೋ, ಅವು ಓದುಗರ ಮನದಲ್ಲಿ ಮುಂದೊಮ್ಮೆ ಕೂಡಿದರೂ ಕೂಡಿಯಾವೆಂದು ಸದ್ಯಕ್ಕೆ ಹಾಗೆಯೇ ಬಿಟ್ಟಂಥವು…
ಕಾವ್ಯವೆಂಬುದು ಪ್ರಾಯಶಃ ಈ ಕವಿಗೆ ಖಿಚಡಿಯ ಹಾಗೆ- ಅದು ಭಾವದ ಖಿಚಡಿಯೂ ಹೌದು, ಬುದ್ಧಿಯ ಖಿಚಡಿಯೂ ಹೌದು, ಅಥವಾ ಅವೆರಡೂ ಕೂಡಿದ ಬದುಕಿನ ಖಿಚಡಿಯೂ ಆದೀತು…
-ಅಕ್ಷರ ಕೆ. ವಿ
Reviews
There are no reviews yet.