Description
ಸ್ಪಷ್ಟವಾದ ಮೆಲುದನಿಯ ಕವಿ, ಕತೆಗಾರ್ತಿ, ಚಿಂತಕಿ ಎಲ್.ಸಿ. ಸುಮಿತ್ರಾ ಅವರ ಸಂವೇದನಾಶೀಲ ಸ್ಪಂದನಗಳ ಈ ಹೊಸ ಸಂಕಲನ, ಮುಕ್ತವಾದ ಓದಿನಲ್ಲಿ ಅವರಿಗಿರುವ ನಂಬಿಕೆಯನ್ನು ಆಪ್ತವಾಗಿ ಮನಗಾಣಿಸುವಂತಿದೆ. ಕಮಲಾದಾಸ್, ಇಂದಿರಾ ಗೋಸ್ವಾಮಿ, ಪ್ರಿಯಾ ತೆಂಡುಲ್ಕರ್, ಅನಿತಾ ದೇಸಾಯಿ, ಅಮೃತಾ ಪ್ರೀತಮ್ ರಂತಹ ಅನ್ಯಭಾಷಾ ಲೇಖಕಿಯರ ಜತೆಗೆ ಕನ್ನಡದ ಕೊಡಗಿನ ಗೌರಮ್ಮ, ವೀಣಾ, ವೈದೇಹಿ, ಮೊದಲಾದವರ ವಿಶಿಷ್ಟ ಕೃತಿಗಳಿಗೆ ಸ್ಪಂದಿಸುತ್ತಾ ಹೋಗುವ ಸುಮಿತ್ರಾರ ಓದಿನ ರೀತಿ ಮತ್ತು ವೈವಿಧ್ಯ, ಅವರ ಲೋಕ ಗ್ರಹಿಕೆಯ ಕ್ರಮದ, ಸಹಜ ವಿಸ್ತರಣೆಯೂ ಆಗಿದೆ.
ಅನಾಮಿಕ ಪ್ರಾಮಾಣಿಕ ಓದೇ ಸಾಹಿತ್ಯದ ಜೀವಾಳ, ಲೇಖಕನೂ ಕೂಡ ಮೂಲಭೂತವಾಗಿ ಓದುಗನೇ, ವಿಮರ್ಶಕ, ವಿಶ್ಲೇಷಕ ಇತ್ಯಾದಿ ಪೂರ್ವಭೂಮಿಕೆಯಿಂದ ಹೊರಟ ಮನಸ್ಸನ್ನೂ ಒಂದು ಕ್ಷಣ ಈ ಉಪಾದಿಗಳಿಂದ ಮುಕ್ತಗೊಳಿಸುವುದೇ ಒಂದು ಓದಿನ ಮಾಯಾಕ್ಷಣ. ಅಂಥ ಕ್ಷಣಗಳಿಗಾಗಿ ಸುಮಿತ್ರಾರ ಮನಸ್ಸು ಹಂಬಲಿಸುತ್ತದೆ. ‘ಸತ್ತವರ ಕಣ್ಣುಗಳನ್ನು ಮುಚ್ಚುವಂತೆ ಆ ಹಳೆಮನೆಯ ಕಿಟಕಿಗಳನ್ನು ಮುಚ್ಚಲಾಯಿತು’ ಎಂದು ಹೇಳುವ ಕಮಲಾದಾಸ್ ರ ಮಾತು ಮತ್ತು ಸಂದರ್ಶನದ ವೇಳೆ ೭೩ರ ಹರಯದಲ್ಲಿ ಆಕೆ ಉಗುರಿಗೆ ಹಚ್ಚಿಕೊಂಡಿದ್ದ ಮೆಹಂದಿ ಎರಡೂ ಸುಮಿತ್ರಾರನ್ನು ಸೆಳೆಯುತ್ತವೆ. ‘ಬ್ರಹ್ಮಪುತ್ರದ ಪುತ್ರಿಯರು’ ಲೇಖನದಲ್ಲಿ ಪ್ರಾಪ್ತವಾಗಿರುವ ಧ್ವನಿಶಕ್ತಿಯೂ ಅನಾಮಿಕ ಓದಿನ ಸೂಕ್ಷ್ಮ ಫಲಶ್ರುತಿಯೇ ಆಗಿದೆ. ವೀಣಾ ಶಾಂತೇಶ್ವರರ ಕಥೆಗಳ ಬಗ್ಗೆ ಬರೆಯುವಾಗ ಸುಮಿತ್ರಾ ಬಳಸುವ ಬೆಲ್ಲ ಮತ್ತು ಸಕ್ಕರೆಗಳ ರೂಪಕವೂ ಮಾರ್ಮಿಕವಾಗಿದೆ.
ಇನ್ನೊಂದು ಕುತೂಹಲದ ಸಂಗತಿಯೆಂದರೆ ಕನ್ನಡಕ್ಕಿಂತ ಕನ್ನಡೇತರ ಲೇಖಕಿಯರ ಬಗ್ಗೆ ಬರೆಯುವಾಗೆಲ್ಲ ಸುಮಿತ್ರಾ ತುಂಬಾ ಮುಕ್ತವಾಗಿ, ತೀವ್ರವಾಗಿ ಹೊಸ ಹೊಸ ನಿಲುವುಗಳೊಂದಿಗೆ ಅಪರೂಪದ ಜೀವಂತಿಕೆಯಿಂದ ಬರೆಯುತ್ತಾರೆ. ಆ ಕೃತಿಗಳ ಅಪರಿಚಿತ ಹೊಳಪು ವಿಭಿನ್ನ ಮಾನವೀಯ ವಿಶೇಷಗಳೇ ಇದಕ್ಕೆ ಕಾರಣವಾಗಿರಬಹುದು.
ಅನ್ಯಭಾಷೆಯ ಕೃತಿಗಳ ಓದು ಹೇಗೆ ನಮ್ಮನ್ನು ಒರೆಗೆ ಹಚ್ಚಿ ಹೊಸ ಅಂಚಿನಲ್ಲಿ ನಿಲ್ಲಿಸಿ ಬಿಡುಗಡೆಗೊಳಿಸುತ್ತದೆ ಎಂಬುದನ್ನೂ ಇದು ಮನಗಾಣಿಸುತ್ತದೆ. ಸಾಹಿತ್ಯಕ ವಿನ್ಯಾಸಗಳಿಗಿಂತ ಹೆಚ್ಚಾಗಿ ಹೊಸ ಮಾನವೀಯ ವಿನ್ಯಾಸಗಳಿಗೆ, ವಿಮರ್ಶೆ ತೆರೆದುಕೊಳ್ಳಬೇಕಾದ ಅಗತ್ಯವನ್ನು ಸದ್ದಿಲ್ಲದೆ ಸಾರುವ ಈ ಬರಹಗಳಿಗಾಗಿ ಸುಮಿತ್ರಾರನ್ನು ಅಭಿನಂದಿಸುತ್ತೇನೆ.
ಜಯಂತ ಕಾಯ್ಕಿಣಿ
ಗೋಕರ್ಣ
Reviews
There are no reviews yet.