Description
`ತಲೆಗಳಿ’ಯ ಕಥಾನಾಯಕ ಕವಲುಕೊಪ್ಪದ ಸುಬ್ರಾಯ ಹೆಗಡೆ ಔದಾರ್ಯದ ಅತ್ಯುತ್ಸಾಹದಲ್ಲಿ ತನ್ನ ಸಂಪತ್ತನ್ನೆಲ್ಲ ವಿವೇಚನೆಯಿಲ್ಲದ ಕೆಲಸಗಳಲ್ಲಿ ಕಳೆದುಕೊಂಡು ದೈವೀನೆರವಿನಿಂದ ಪುನಃ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮೇಲೇರುತ್ತಾನೆ. ಮತ್ತು ವಿವೇಚನೆಯಿಂದ ಕೂಡಿದ ಆದರ್ಶಗಳನ್ನು ಪಾಲಿಸುತ್ತ ಕೊನೆಗೆ ಜೀವನದಲ್ಲಿ ಹೆಚ್ಚಿನ ಅರ್ಥ ಕಾಣದೆ ಗತಿಸಿಹೋದ ಹೆಂಡತಿ ಸರಸ್ವತಿಯ ಅಸ್ಥಿವಿಸರ್ಜನೆಗೆ ಗಂಗಾನದಿಯಲ್ಲಿ ಇಳಿದು ನದಿಯೊಳಗೆ ಹೊರಟೇಹೋಗುತ್ತಾನೆ. ಇಂದಿನ ವಿಮರ್ಶೆಯ ದೃಷ್ಟಿಯಲ್ಲಿ ಇದು ನಾಟಕೀಯವಾಗಿ ಕೊನೆಗೊಳ್ಳುವ ಅತಿಯಾದ ಭಾವುಕತೆಯ ಕಾದಂಬರಿ. ಕಥೆಯ ಈ ರೇಖಾ ಚಿತ್ರದಿಂದ ಕಾಣುವುದು ಕೂಡ ಇಷ್ಟೇ ಆಗಿದೆ. ಆದರೆ ಕೃತಿಯಿಂದ ಓದುಗ ಪಡೆಯುವ ಅನುಭವವೇ ಬೇರೆ. ಕೃಷಿಯನ್ನೇ ಕಚ್ಚಿಕೊಂಡು ಬದುಕು ಸಾಗಿಸುವ ಶಿರಸಿ-ಸಿದ್ದಾಪುರ ಭಾಗದ ಜನರ ಚಟುವಟಿಕೆಗಳು, ಅವರ ಆರ್ಥಿಕ ನೆಲೆ, ಅದರ ಮಿತಿ, ಧಾರ್ಮಿಕ ನಂಬುಗೆಗಳು, ರಾತ್ರಿಯ ಗ್ಯಾಸಲೈಟಿನ ಬೆಳಕಿನಲ್ಲಿ ಯಕ್ಷಗಾನದ ಅಲೌಕಿಕ ಸನ್ನಿವೇಶಗಳಿಗಾಗಿ ಕಾಯುವ ಸ್ವಪ್ನಶೀಲ ಕಾತುರಗಳು, ಅವರವರ ಮನೆದೇವರು, ಗ್ರಾಮದೇವತೆ, ಗುಪ್ತಾರಾಧನೆಗಳು, ಇಷ್ಟಸಿದ್ಧಿಗಳು-ಇವೆಲ್ಲ `ತಲೆಗಳಿ’ಯಲ್ಲಿ ಫಲಿತವಾಗುವ ನಿಜಗಳು. `ತಲೆಗಳಿ’ ಕಾದಂಬರಿಗಿಂತ ಹೆಚ್ಚಾಗಿ ಒಂದು ಮಹಾಕಾವ್ಯ. ಕಾದಂಬರಿಯಲ್ಲಿ ಅನುಭವದ ರಚನೆ ಎಲ್ಲೂ ಲಯ ತಪ್ಪುವುದಿಲ್ಲ ಎನ್ನುವುದು ಇದು ಕಾವ್ಯದಂತೆ ಕಾಣಲು ಒಂದು ಕಾರಣವಾದರೆ, ಇದರಲ್ಲಿ ಕಾದಂಬರಿಕಾರರು ಯಶಸ್ವಿಯಾಗಿ ನೆಲೆಯೂರಿಸುವ ಧರ್ಮ-ಅರ್ಥ-ಕಾಮ- ಮೋಕ್ಷಗಳ ಪ್ರಸ್ತುತತೆ ಮತ್ತೊಂದು ಕಾರಣ. ನಮ್ಮ ಪುರಾಣಗಳೂ ಮಹಾಕಾವ್ಯಗಳೂ ಪ್ರತಿಪಾದಿಸುವುದು ಈ ವಸ್ತುವನ್ನೇ.
ಆರ್.ಡಿ. ಹೆಗಡೆ ಆಲ್ಮನೆ ಅವರ ಮುನ್ನುಡಿಯಿಂದ
Reviews
There are no reviews yet.