Description
ಕನ್ನಡದ ಕಥನ ಪರಂಪರೆ ತುಂಬ ಸಮೃದ್ಧವಾಗಿದ್ದರೂ ಕಥನ ಕಲೆಯನ್ನು ಕುರಿತ ಬರಹಗಳು ತೀರಾ ಕಡಿಮೆ ಎಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಎಂ.ಎಸ್.ಶ್ರೀರಾಮ್ ಅವರ ಕಥನ ಕುತೂಹಲ ಒಂದು ಸ್ವಾಗತಾರ್ಹ ಪ್ರಕಟಣೆ. ಹಾಗೆ ನೋಡಿದರೆ ಶ್ರೀರಾಮ್ ಕನ್ನಡದ ವಿದ್ವತ್ತಿನ, ವಿಮರ್ಶೆಯ ಪರಂಪರೆಯಲ್ಲಿ ಮೂಡಿಬಂದವರಲ್ಲ. ಅವರೊಬ್ಬ ಪ್ರತಿಭಾವಂತ ಕತೆಗಾರರು. ಸಾಹಿತ್ಯ ಕೂಡ ಅವರ ಹಲವಾರು ಆಸಕ್ತಿಗಳಲ್ಲಿ ಕೇವಲ ಒಂದು. ಅವರು ಮ್ಯಾನೇಜ್‌ಮೆಂಟಿಗೆ ಸಂಬಂಧಪಟ್ಟ ವಿಷಯಗಳಲ್ಲಿ ತಜ್ಞರು. ಆ ವಿಷಯಗಳನ್ನು ಕುರಿತು ಬರೆಯುವವರು ಮತ್ತು ಬೋಧಿಸುವವರು. ಅವರು ತಮ್ಮ ಕತೆಗಳಿಂದ ಎಷ್ಟೋ, ಅರ್ಥಶಾಸ್ತ್ರವನ್ನು ಕುರಿತ ಬರಹಗಳಿಂದಲೂ ಪ್ರಸಿದ್ಧರು. ಆದರೆ ಕಥನವೆಂಬುದು ಅವರ ಮೂಲ ಮನೋಧರ್ಮವೆಂದು ಕಾಣುತ್ತದೆ. ಹಾಗಾಗಿ ಅವರ ಸಾಹಿತ್ಯೇತರ ಬರಹಗಳಲ್ಲೂ, ಪ್ರತಿನಿತ್ಯದ ಮಾತು, ಹರಟೆಗಳಲ್ಲೂ ಕಥನವೇ ಪ್ರಧಾನ. ಈ ಗುಣದಿಂದಾಗಿ ಜಡವೆನಿಸುವ ಎಷ್ಟೋ ಸಂಗತಿಗಳು ಇವರ ಕಥಾರೂಪದ ಬರವಣಿಗೆಯಿಂದಾಗಿ ಸ್ವಾರಸ್ಯಕರವಾಗಿರುತ್ತವೆ. ಹಾಗಾಗಿ ಶ್ರೀರಾಮ್ ಅವರ ಪುಸ್ತಕವು ಅವರನ್ನು ಬಲ್ಲವರಿಗೆ ಅನಿರೀಕ್ಷಿತವೇನೂ ಅಲ್ಲ. ವಿಮರ್ಶಕರೋ, ವಿದ್ವಾಂಸರೋ ಆಗಿಲ್ಲದಿರುವುದು ಶ್ರೀರಾಮರ ವಿಷಯದಲ್ಲಿ ಖಂಡಿತವಾಗಿ ಒಂದು ಋಣಾತ್ಮಕ ಸಂಗತಿಯಲ್ಲ. ಬದಲಾಗಿ ಈ ಕಾರಣದಿಂದ ಅವರ ಪುಸ್ತಕವು ವಿದ್ವತ್ತಿನ ಭಾರವನ್ನು ಕಳಚಿಕೊಂಡು ಈ ಬಗೆಯ ಹೆಚ್ಚಿನ ಕನ್ನಡ ಬರಹಗಳಲ್ಲಿ ಅಷ್ಟಾಗಿ ಕಾಣದ ಲವಲವಿಕೆಯಿಂದ ಕೂಡಿದೆ. ಒಂದು ಶಾಸ್ತ್ರವನ್ನು ಪರಿಚಯಿಸುವ ಪ್ರಾಧ್ಯಾಪಕನ ಧಾಟಿ ಇಲ್ಲಿಲ್ಲ. ಒಂದು ಸಿದ್ಧಾಂತವನ್ನು ಕಟ್ಟುವ ಒತ್ತಡವೂ ಇವರ ಮೇಲಿಲ್ಲ. ಬದಲಾಗಿ ಕುಶಲಿಯಾದ ಕತೆಗಾರನೊಬ್ಬ ತನ್ನ ಪ್ರಕಾರದ ಸ್ವರೂಪ, ಸಾಧ್ಯತೆಗಳಿಂದ ತಾನೇ ವಿಸ್ಮಿತನಾಗಿ ಆ ಬಗ್ಗೆ ಕುತೂಹಲದಿಂದ ವಿಚಾರಮಾಡುತ್ತಿದ್ದಾನೆ. ಈ ದೃಷ್ಟಿಯಿಂದ ಈ ಪುಸ್ತಕಕ್ಕೆ ಲೇಖಕರು ಕಥನ ಕುತೂಹಲ ಎಂಬ ಶೀರ್ಷಿಕೆಯನ್ನು ಕೊಟ್ಟಿರುವುದು ತುಂಬ ಉಚಿತವಾಗಿದೆ. ಶ್ರೀರಾಮ್ ಇಲ್ಲಿ ಕಥನವೆಂಬ ಕುತೂಹಲದ ಬಗ್ಗೆ ಧ್ಯಾನಿಸುತ್ತಿರುವಂತೆ ಕಥನವನ್ನು ಕುರಿತ ತಮ್ಮ ಕುತೂಹಲವನ್ನೂ ತೆರೆದಿಟ್ಟಿದ್ದಾರೆ.
Reviews
There are no reviews yet.