Description
ಕಳೆದ ಒಂದೆರಡು ದಶಕಗಳಲ್ಲಿ ತಮ್ಮ ವಿಶಿಷ್ಟ ಶಕ್ತಿಗಳ ಮೂಲಕ ಮಹಿಳಾ ಕಾವ್ಯದ ಆಳ, ಎತ್ತರಗಳನ್ನು ವಿಸ್ತರಿಸುತ್ತಿರುವ ಕವಿತೆಗಳಲ್ಲಿ ಚಂದ್ರಿಕಾ ಅವರೂ ಒಬ್ಬರು. ಈಗಾಗಲೇ ಅವರು ಪ್ರಕಟಿಸಿರುವ ಸೂರ್ಯಗಂಧೀ ಧರಣೀಯ ಕವಿತೆಗಳು ತೊರಿಸುವಂತೆ ಅವರು ಮಹತ್ವಾಕಾಂಕ್ಷೆಯ ಕವಿ. ಸ್ತ್ರೀವಿಶಿಷ್ಟವಾದ ಅನುಭವವನ್ನು ಅಭಿವ್ಯಕ್ತಿಸುವುದರಲ್ಲಿಯೇ ತೃಪ್ತರಾಗದ ಅವರ ಕಾವ್ಯ ಲೌಕಿಕ-ಅಲೌಕಿಕ, ಸ್ವ-ಪರ, ದೇವ-ಮನುಷ್ಯ ಇಂಥ ದ್ವಂದ್ವಗಳನ್ನು ಮೀರಿದ ‘ಸಂಗಮ ಸಾಮ್ರಾಜ್ಯ’ವನ್ನು ಕಟ್ಟುವ ಹಂಬಲವನ್ನು ಹೊಂದಿರುವುದರಿಂದ ಅನನ್ಯತೆಯನ್ನೂ ಸಾಧಿಸುತ್ತದೆ.
ಚಂದ್ರಿಕಾ ಮೂಲತಃ ಪ್ರತಿಮಾನಿಷ್ಠ ಕವಿ. ಪ್ರತಿಮೆಯೇ ಅವರ ಕಾವ್ಯದ ಮೂಲದ್ರವ್ಯ ಹಾಗು ಘಟಕ. ಅವರ ಕಾವ್ಯದ ನೆಲೆ ನೈಜತೆಯ ಅನುಭವ. ಹೀಗಾಗಿ ಪ್ರೀತಿಯಂಥ ವೈಯಕ್ತಿಕ ಅನುಭವ, ಆಕಾಂಕ್ಷೆಗಳ ಬಗ್ಗೆ ಬರೆಯುವಾಗಲೂ ಅವರು ಈ ನೆಲೆಯಿಂದಲೇ ಹೊರಡುತ್ತಾರೆ. ಇದು ಅವರು ಮೆಚ್ಚುವ ಕವಿಗಳಾದ ಅಕ್ಕಮಹಾದೇವಿ ಹಾಗು ಬೇಂದ್ರೆಯವರ ಕಾವ್ಯದ ನೆಲೆಯಾದುದರಿಂದ ಅವರ ಕಾವ್ಯಕ್ಕೆ ಪರಂಪರೆಯ ಬೆಂಬಲವೂ ದೊರಕುತ್ತದೆ. ಅವರ ಹೊಸ ಸಂಕಲನ ತಾಮ್ರವರ್ಣದ ತಾಯಿ ನಿಶ್ಚಿತವಾಗಿಯೂ ಅವರು ಆಯ್ದುಕೊಂಡ ಕಠಿಣ ಮಾರ್ಗದಲ್ಲಿ ಸಾಧಿಸಿದ ಮುನ್ನಡೆಯ ಸ್ಪಷ್ಟ ಹೆಜ್ಜೆ.
-ಜಿ. ಎಸ್. ಅಮೂರ
Reviews
There are no reviews yet.